ರಾಂ ಅಜೆಕಾರು ಕಾರ್ಕಳ
ಕನ್ನಡಪ್ರಭವಾರ್ತೆ ಕಾರ್ಕಳಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಸುಳಿಗೋಡು ಹೊಳೆಗೆ ಹೊಸ ಸೇತುವೆ ನಿರ್ಮಾಣಕ್ಕೆ ಮಹತ್ವದ ಅನುಮೋದನೆ ದೊರೆತಿದೆ. ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿದ್ದು, ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕಳುಹಿಸಲಾಗಿದೆ. ಎರಡು ಬಾರಿ ಕೊಚ್ಚಿಹೋಗಿತ್ತುಕಾರ್ಕಳ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಾಲೆ ಮತ್ತಾವು ಪ್ರದೇಶದಲ್ಲಿ 11 ಮಲೆಕುಡಿಯ ಬುಡಕಟ್ಟು ಕುಟುಂಬಗಳು ವಾಸಿಸುತ್ತಿವೆ. ಇವರು ಕಬ್ಬಿನಾಲೆ, ಹೆಬ್ರಿ, ಮುನಿಯಾಲು ಸಂಪರ್ಕಿಸಲು ಕಬ್ಬಿನಾಲೆ ನದಿಗೆ ಅಡ್ಡಲಾಗಿ ನಿರ್ಮಿಸುವ ಅಪಾಯಕಾರಿ ಮರದ ಸೇತುವೆಯನ್ನೇ ಅವಲಂಬಿಸಬೇಕಾಗಿದೆ. ಕಳೆದ ಬಾರಿ ಮಳೆಗಾಲದಲ್ಲಿ ಈ ಸೇತುವೆ ಎರಡು ಬಾರಿ ಕೊಚ್ಚಿಕೊಂಡು ಹೋಗಿದ್ದು, ಇತ್ತೀಚೆಗೆ ಗಾಳಿ–ಮಳೆಗೆ ಆಧಾರ ಕಂಬವೂ ನೀರಿನ ಸೆಳೆತಕ್ಕೆ ಒಳಗಾಗಿ ಹಾನಿಗೊಳಗಾಗಿದೆ.ಐದು ಸರಿಗೆಗಳ ಸೇತುವೆ
ಸೇತುವೆ ಇಲ್ಲದಿದ್ದರೆ ಮಳೆಗಾಲದಲ್ಲಿ ಮೂರು ತಿಂಗಳವರೆಗೆ ಪೇಟೆಯ ಸಂಪರ್ಕ ಕಡಿತವಾಗುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿಯುವ ಕಬ್ಬಿನಾಲೆ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುವುದರಿಂದ ಜನರು ಐದು ಕಬ್ಬಿಣದ ಸರಿಗೆಗಳ ಹಿಡಿತದಲ್ಲಿರುವ ಸೇತುವೆಯಲ್ಲಿ ಜೀವ ಪಣಕ್ಕಿಟ್ಟು ದಾಟಬೇಕಾದ ಪರಿಸ್ಥಿತಿ ಇದೆ. ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತರಿಗೆ ಸಂಚಾರ ಸವಾಲಾಗಿದ್ದು, ಮಕ್ಕಳನ್ನು ಪೋಷಕರು ಕಾರ್ಕಳ ಮತ್ತು ಹೆಬ್ರಿಯ ವಸತಿ ನಿಲಯಗಳಿಗೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲಿನ ನಿವಾಸಿಗಳು ಮಳೆಗಾಲಕ್ಕೂ ಮುನ್ನ ಮೂರು–ನಾಲ್ಕು ತಿಂಗಳ ಅಕ್ಕಿ ಹಾಗೂ ದಿನಸಿ ಶೇಖರಿಸಿಕೊಳ್ಳಬೇಕಾಗುತ್ತದೆ. ನಕ್ಸಲ್ ನೆಲದಲ್ಲಿ ಮೂಲಸೌಕರ್ಯಗಳೇ ಇಲ್ಲ2005ರ ಜುಲೈ 28ರಂದು ಮತ್ತಾವು ಬಳಿ ನಡೆದ ನೆಲಬಾಂಬ್ ಸ್ಫೋಟಗೊಂಡು ನಕ್ಸಲ್ ಚಟುವಟಿಕೆ ಇರುವ ಬಗ್ಗೆ ತಿಳಿದುಬಂದಿತ್ತು. ಈ ಪ್ರದೇಶದಲ್ಲಿ ದಶಕಗಳಿಂದಲೂ ಮೂಲಸೌಕರ್ಯವೆಂಬುದು ಮರೀಚಿಕೆಯಾಗಿದೆ. ಹಲವು ವರ್ಷಗಳಿಂದ ಬೇಡಿಕೆಯಲ್ಲಿದ್ದ ಸೇತುವೆ–ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ 2 ಕೋಟಿ ರು. ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆಯೂ ನಡೆದಿದ್ದರೂ, ವನ್ಯಜೀವಿ ವಿಭಾಗದ ಅನುಮತಿ ಬಾಕಿ ಇರುವ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ.
ಈಗ ರಾಜ್ಯ ವನ್ಯಜೀವಿ ಮಂಡಳಿಯ ಅನುಮೋದನೆ ದೊರೆತಿರುವುದು ಮಹತ್ವದ ಬೆಳವಣಿಗೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅಂತಿಮ ಸಹಿ ಸಿಕ್ಕ ಬಳಿಕ ಮತ್ತಾವು ಮಲೆಕುಡಿಯ ಕುಟುಂಬಗಳಿಗೆ ವರ್ಷಪೂರ್ತಿ ಸುಗಮ ಸಂಚಾರದ ಕನಸು ಸಾಕಾರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆಅರಣ್ಯ ಹಕ್ಕು ಕಾಯ್ದೆ ಜಾರಿಯಾದ ಬಳಿಕದಿಂದ ಮತ್ತಾವು ಸೇತುವೆಗಾಗಿ ಕಳೆದ 20 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದೇವೆ.
ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ನಮ್ಮ ಸಮುದಾಯದ ಧ್ವನಿಯನ್ನು ಎತ್ತಿದ್ದೇವೆ. ಮಲೆಕುಡಿಯ ಕುಟುಂಬಗಳ ಸುರಕ್ಷಿತ ಸಂಚಾರವೇ ನಮ್ಮ ಹೋರಾಟದ ಮುಖ್ಯ ಉದ್ದೇಶವಾಗಿತ್ತು. ಇದೀಗ ರಾಜ್ಯ ವನ್ಯಜೀವಿ ಮಂಡಳಿಯ ಅನುಮೋದನೆಯೊಂದಿಗೆ ಅಂತಿಮ ಹಂತ ತಲುಪಿರುವುದು ಸಂತೋಷ ತಂದಿದೆ. ಇದು ಕಾಡಂಚಿನ ಜನರ ಹಕ್ಕು ಮತ್ತು ಗೌರವಯುತ ಬದುಕಿನ ಜಯವಾಗಿದೆ.
ಶ್ರೀಧರ ಗೌಡ, ರಾಜ್ಯಾಧ್ಯಕ್ಷರು, ಮಲೆಕುಡಿಯ ಸಂಘ ಕರ್ನಾಟಕಮತ್ತಾವು ಸೇತುವೆ ನಿರ್ಮಾಣಕ್ಕೆ ರಾಜ್ಯ ವನ್ಯಜೀವಿಮಂಡಳಿ ಗ್ರೀನ್ ಸಿಗ್ನಲ್ ನೀಡಿದ್ದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆಗಾಗಿ ಕಳುಹಿಸಲಾಗಿದೆ, ಸದ್ಯದಲ್ಲಿ ಅಂತಿಮ ಹಂತಕ್ಕೆ ತಲುಪಲಿದೆ.
ಶಿವರಾಂ ಬಾಬು ಡಿಸಿಎಫ್ ಕುದುರೆಮುಖ ವನ್ಯಜೀವಿ ವಿಭಾಗಮತ್ತಾವು ಎರಡು ಕೋಟಿ ರು. ಅನುದಾನ ಮೀಸಲಿಟ್ಟಿತ್ತು. ಆದರೆ ವನ್ಯಜೀವಿ ಮಂಡಳಿ ಅನುಮತಿ ನೀಡದ ಕಾರಣ ಅನುದಾನ ವಾಪಾಸ್ ಹೋಗಿತ್ತು. ಈ ಭಾಗದ ಜನರ ಸುದೀರ್ಘ ಹೋರಾಟಕ್ಕೆ ಸಿಕ್ಕ ನ್ಯಾಯವಾಗಿದೆ.
ವಿ. ಸುನೀಲ್ ಕುಮಾರ್ ಶಾಸಕರು ಕಾರ್ಕಳ