ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯಾರ ಮಧ್ಯಸ್ಥಿಕೆ ಇಲ್ಲದೆ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಗ್ಯಾರಂಟಿ ಯೋಜನೆಗಳ ಲಾಭ ಮುಟ್ಟಿಸುವ ಕಾರ್ಯ ರಾಜ್ಯ ಸರಕಾರ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.ನವನಗರದ ಕಲಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ ಗ್ಯಾರಂಟಿ ಕಾರ್ಯಾಗಾರ-ಗ್ಯಾರಂಟಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು ₹1.19 ಲಕ್ಷ ಕೋಟಿಯನ್ನು ಡಿಬಿಟಿ ಮೂಲಕ ನೇರವಾಗಿ ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯ ಸರಕಾರ ಮಾಡುತ್ತಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಯಿಂದ ಬೊಕ್ಕಸ ಬರಿದಾಗದೇ ಅರ್ಥಶಾಸ್ತ್ರಜ್ಞರ ವರದಿಯ ಪ್ರಕಾರ ಆರ್ಥಿಕ ಸಭಲತೆಗೆ ನಾಂದಿಯಾಗಿದೆ. ಅರ್ಹ ಪ್ರತಿ ಮನೆಗಳಿಗೆ ಹಣ ಜಮೆ ಆಗುತ್ತಿದೆ. ಇದು ಹೇಗೆ ಬಂತು, ಯಾರಿಂದ ಬಂದಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಟ್ಟಕಡೆಯ ಫಲಾನುಭವಿಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ಮನೆಗೆ 5 ಗ್ಯಾರಂಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಈ ಯೋಜನೆಗಳಿಂದ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದ್ದು, ಅವರ ಜೀವನದ ಗುಣಮಟ್ಟ ಸುಧಾರಿಸಿದೆ ಎಂದು ತಿಳಿಸಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳು ಬಡವರಿಗೆ ಆರ್ಥಿಕ ಚೈತನ್ಯ ನೀಡಿವೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಸರಕಾರದ ಮಾದರಿ ಅನುಸರಿಸಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ₹5 ಸಾವಿರ ಜಮೆ ಆಗುತ್ತಿದೆ. 5 ವರ್ಷದಲ್ಲಿ ₹3 ಲಕ್ಷ ನೀಡಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾದ್ಯಕ್ಷೆ ಪುಷ್ಪಾ ಅಮರನಾಥ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಮಹಿಳೆ ಪ್ರಗತಿ ಹೊಂದಿದರೆ ದೇಶ ಅಭಿವೃದ್ದಿ ಹೊಂದಿದಂತೆ. ಅದಕ್ಕಾಗಿಯೇ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿಯಿಂದ ಮಹಿಳೆಯರಿಗೆ ರಾಜಕೀಯ ಪ್ರವೇಶ ದೊರೆತಿದ್ದು, ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಸೀತಾಲಕ್ಷ್ಮೀ ಗ್ಯಾರಂಟಿ ಯೋಜನೆಗಳಿಂದ ಆಗುವ ಲಾಭ, ಆರ್ಥಿಕತೆಯ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅನೀಲಕುಮಾ ದಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಲಕ್ಷ್ಮೀ ಮೇಟಿ ಯೋಜನೆಯಿಂದ ಉಂಟಾದ ಲಾಭದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಬುಡಾದ ಅಧ್ಯಕ್ಷ ಅಬ್ದುಲ್‌ರಜಾಕ್ ಬೇಲೂರ, ಜಿಲ್ಲಾಧಿಕಾರಿ ಸಂಗಪ್ಪ, ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ ಸೇರಿದಂತೆ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಉಪಸ್ಥಿತರಿದ್ದರು.ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಲ್ಲಿ ಅನೇಕರು ಮೃತಪಟ್ಟಿದ್ದಾರೆ. ಆದರೂ ಅವರ ಖಾತೆಗೆ ಯೋಜನೆಯ ಹಣ ಹೋಗಿದೆ. ಹಣ ಹೋಗದಂತೆ ತಡೆಯುವ ಜೊತೆಗೆ ಜಮೆ ಆಗಿರುವ ಹಣವನ್ನು ಹಿಂಪಡೆಯುವ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ 1 ಲಕ್ಷ 44 ಸಾವಿರದ 56 ಫಲಾನುಭವಿಗಳು ಮೃತಪಟ್ಟಿದ್ದಾರೆ.
-ಎಚ್.ಎಂ.ರೇವಣ್ಣ, ಅಧ್ಯಕ್ಷರು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ