ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವುದಾಗಿ ಸುಪ್ರೀಂ ಕೋರ್ಟ್ ೨೦೨೪ರ ಆಗಸ್ಟ್‌ನಲ್ಲಿಯೇ ಆದೇಶ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಯಾರ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಗೊಳಿಸದೆ ನಾಟಕವಾಡುತ್ತಿದೆ ಎನ್ನುವುದನ್ನು ಬಹಿರಂಗಪಡಿಸುವಂತೆ ಒತ್ತಾಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಬಳ್ಳಾರಿ ಆರೋಪಿಸಿದರು.

ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವುದಾಗಿ ಸುಪ್ರೀಂ ಕೋರ್ಟ್ ೨೦೨೪ರ ಆಗಸ್ಟ್‌ನಲ್ಲಿಯೇ ಆದೇಶ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಯಾರ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಗೊಳಿಸದೆ ನಾಟಕವಾಡುತ್ತಿದೆ ಎನ್ನುವುದನ್ನು ಬಹಿರಂಗಪಡಿಸುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈಗಾಗಲೇ ಕಾಂಗ್ರೆಸ್ ಸರ್ಕಾರದ ಬಳಿ ೩ ಆಯೋಗಗಳ ವರದಿಯಿದೆ. ಈ ಸಂಬಂಧ ಸದನದಲ್ಲಿ ಹಾಗೂ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ, ರಾಜ್ಯಪಾಲರ ಅಂಕಿತ ಪಡೆದರೂ ಯಾವ ಕಾರಣಕ್ಕೆ ತಡೆಹಿಡಿದಿದ್ದಾರೆ. ನಾಗಮೋಹನ್‌ದಾಸ್ ಅವರ ವರದಿ ಪ್ರಕಾರ ಒಳ ಮೀಸಲಾತಿ ಜಾರಿ ಮಾಡದೇ ರಾಜಕೀಯ ಲಾಭಕ್ಕಾಗಿ ೩ ಗುಂಪು ಮಾಡಿ ಬೇಕಾಬಿಟ್ಟಿಯಾಗಿ ಜಾರಿ ಮಾಡಿದೆ ಎಂದು ದೂರಿದರು.

ನೆರೆ ರಾಜ್ಯ ತಮಿಳುನಾಡಿನಲ್ಲಿ ಶೇ.೫೯ ರಷ್ಟು, ಪಂಚಾಬ್‌ನಲ್ಲಿ ಶೇ.೫೬, ಹರಿಯಾಣದಲ್ಲಿ ಶೇ.೫೮ರಷ್ಟು ಮೀಸಲಾತಿಯಿದೆ. ಆದರೆ, ನಮ್ಮ ರಾಜದಲ್ಲಿ ಶೇ.೫೬ರಷ್ಟು ಮೀಸಲಾತಿ ಜಾರಿ ಮಾಡಲು ಏನು ಅಡ್ಡಿ ಎಂದು ಪ್ರಶ್ನಿಸಿದ ಅವರು, ೨೦೧೯ ಚುನಾವಣೆ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡದಿರುವುದೇ ಸೋಲಿಗೆ ಕಾರಣ ಎಂದು ಒಪ್ಪಿಕೊಂಡಿದ್ದೀರಿ. ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಮತ್ತೆ ಕಾಂಗ್ರೆಸ್‌ಗೆ ಶೋಷಿತ ಸಮುದಾಯಗಳು ತಕ್ಕ ಪಾಠ ಕಲಿಸಲಿವೆ. ಸದ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲೂ ಕಾಂಗ್ರೆಸ್‌ನ್ನು ಸೋಲಿಸುವುದಾಗಿ ಎಚ್ಚರಿಸಿದರು.

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಿರಿಯೂರಿನ ಆದಿಜಾಂಬವ ಮಠದ ಪೀಠಾಧಿಪತಿ ಶ್ರೀಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ಹರಿಹರದಿಂದ ಪಾದಯಾತ್ರೆ ನಡೆಯುತ್ತಿದೆ. ಅದು ಮಾ.೨೭ರಂದು ಬೆಂಗಳೂರು ತಲುಪಲಿದೆ. ಅಂದು ನಡೆಯುವ ಸಭೆಯಲ್ಲಿ ರಾಜ್ಯಾದ್ಯಂತ ಇರುವ ಮಾದಿಗ ಸಮುದಾಯದ ಹೋರಾಟಗಾರರು ಭಾಗವಹಿಸಿ ಸರ್ಕಾರವನ್ನು ಎಚ್ಚರಿಸುವಂತೆ ಮನವಿ ಮಾಡಿದರು.

ಗೋಷ್ಟಿಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಪಾಪಯ್ಯ, ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ, ನಾಗೇಂದ್ರ, ಪ್ರಸನ್ನ ಚಕ್ರವರ್ತಿ ಇತರರಿದ್ದರು. ಸಿದ್ದರಾಮಯ್ಯರಿಂದ ದಲಿತ ಸಮುದಾಯ ಒಡೆಯುವ ಹನ್ನಾರ: ವೆಂಕಟಗಿರಿಯಯ್ಯ

ಮಂಡ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿಗಾಗಿ ಮಾಲ-ಮಾದಿಗರ ನಡುವಿನ ಸಂಘರ್ಷ ಅತಿರೇಖಕ್ಕೆ ತಿರುಗಿದೆ. ಒಬ್ಬರನ್ನೊಬ್ಬರು ಹೊಡೆದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಬ್ಯಾಕ್‌ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನೀತಿ ಜಾರಿ ಹೋರಾಟ ನೆಪವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯವನ್ನು ವಂಚಿಸುವ ಹುನ್ನಾರ ರೂಪಿಸಿದ್ದಾರೆ. ದಲಿತರು ಒಂದಾದರೆ ದಲಿತ ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸುವ ಸಂಚು ಇದರ ಹಿಂದಿದೆ. ಆದ್ದರಿಂದ ಸಮುದಾಯದ ಎಲ್ಲ ಮುಖಂಡರು ಒಂದೆಡೆ ಕುಳಿತು ಪ್ರಬುದ್ಧತೆಯಿಂದ ಚರ್ಚಿಸಿ ತಮ್ಮ ಪಾಲನ್ನು ಸಮಾನವಾಗಿ ಹಂಚಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು.

ರಾಜ್ಯದ ಜನಸಂಖ್ಯೆಯಲ್ಲಿ ಶೇ.26ರಷ್ಟು ದಲಿತ ಸಮುದಾಯವಿದೆ. ಅದರಂತೆ ಮೀಸಲಾತಿ ಪಡೆಯಲು ಗಂಭೀರ ಹೋರಾಟಕ್ಕೆ ಮುಂದಾಗಬೇಕಿದೆ. ದಲಿತರ ಒಗ್ಗೂಡಿದ ಹೋರಾಟ ತಡೆಯುವ ದುರುದ್ದೇಶದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಷಡ್ಯಂತ್ರ ರೂಪಿಸುತ್ತಿವೆ. ಇದನ್ನು ಮೆಟ್ಟಿನಿಂತು ಸರಕಾರದ ವಿಳಂಬ ನೀತಿ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷೆ ಜಿ.ಸುಶ್ಮಿತ, ಜಿಲ್ಲಾ ಸಂಘಟನಾ ಕಾರ್‍ಯದರ್ಶಿ ಸುರೇಶ್‌ಕುಮಾ, ತಾಲೂಕು ಅಧ್ಯಕ್ಷರಾದ ಮುತ್ತರಾಜ್, ಗೀತಾ, ಸ್ವಾಮಿ, ವಿಮಲ ನಂದೀಶ್, ಕೆ.ಗೀತಾ ಇದ್ದರು.