ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಳಮೀಸಲಾತಿ ಜಾರಿಗೊಳಿಸದೆ ಹೊಸ ಉದ್ಯೋಗಗಳನ್ನು ನೇಮಕ ಮಾಡಿಕೊಳ್ಳಬಾರದು, ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟ, ಒಳಮೀಸಲಾತಿ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರ ಒಳಮೀಸಲಾತಿ ಇಲ್ಲದೆ 56,432 ಉದ್ಯೋಗಗಳ ನೇಮಕಾತಿಗೆ ಫೆ.27 ರಂದು ಸುತ್ತೋಲೆಯನ್ನು ಹೊರಡಿಸಿದೆ. ಇದು ಸರಿಯಲ್ಲ. ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಒಳಮೀಸಲಾತಿ ಅಳವಡಿಸಿ ಶೇ.15ರಷ್ಟು ಮೀಸಲಾತಿಯಲ್ಲಿ ಉದ್ಯೋಗ ನೇಮಕಾತಿ ಮಾಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನವನ್ನು ಕೈಬಿಡಬೇಕು. ಅಲೆಮಾರಿ ಸಮುದಾಯಗಳಿಗೆ ಶೇ.1 ರಷ್ಟು ಪ್ರತ್ಯೇಕ ಮಿಸಲಾತಿ ನೀಡಬೇಕು. ಪರಿಶಿಷ್ಟ ಜಾತಿಗೆ 17, ಪರಿಶಿಷ್ಟ ವರ್ಗಕ್ಕೆ 7, ಒಟ್ಟು ಶೇ.56ರ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು. ಪರಿಶಿಷ್ಟರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಭಾನುಪ್ರಸಾದ್, ಎಚ್‌.ಎನ್‌.ಮಂಜುನಾಥ್ , ಅನೂಪ್, ರಂಗನಾಥ್, ಚಿನ್ನಯ್ಯ, ಅಣ್ಣಪ್ಪ, ಶಿವಲಿಂಗಪ್ಪ, ಮಂಜಪ್ಪ, ಎಸ್.ನಾಗರಾಜ್, ಮಧು, ಶ್ರೀಧರ್, ಮೂರ್ತಿ, ಶಿವಪ್ಪ, ಕೆಂಪಮ್ಮ, ಮಂಗೋಟೆ ಹನುಂತಪ್ಪ, ನಾಗಪ್ಪ, ವಿಜಯಕುಮಾರ್, ತ್ಯಾಜವಳ್ಳಿ ಚಂದ್ರಪ್ಪ, ಮಂಜುನಾಥ್, ಮೀನಾಕ್ಷಮ್ಮ, ಮಾಲಾ, ಮಹಾಲಕ್ಷ್ಮೀ, ಪೆಂಚಾಲಯ್ಯ, ಎ.ಕೆ. ಹನುಮಂತಪ್ಪ ಸೇರಿದಂತೆ ಹಲವರಿದ್ದರು.