ಸಾರಾಂಶ
ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಒಳಜಗಳ ಜೋರಾಗಿ ನಡೆಯುತ್ತಿದೆ. ಇದು ವಿಕೋಪಕ್ಕೆ ಹೋಗಿ ಸರ್ಕಾರದ ಪತನವಾಗಲಿದೆ. ಶೀಘ್ರವೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.
ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಒಳಜಗಳ ಜೋರಾಗಿ ನಡೆಯುತ್ತಿದೆ. ಇದು ವಿಕೋಪಕ್ಕೆ ಹೋಗಿ ಸರ್ಕಾರದ ಪತನವಾಗಲಿದೆ. ಶೀಘ್ರವೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆ ಮುಖ್ಯಮಂತ್ರಿ ಆಯ್ಕೆಯ ಗೊಂದಲ ಸೃಷ್ಟಿಯಾಗಿತ್ತು. ಒಪ್ಪಂದ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ತಂತ್ರ- ಪ್ರತಿತಂತ್ರ ನಡೆಸುತ್ತಿದ್ದಾರೆ ಎಂದರು.ತುಷ್ಟೀಕರಣದ ಹೇಳಿಕೆ ನಿಲ್ಲಿಸಲಿ
ಬುರ್ಖಾ ಧರಿಸಿ ಆರ್‌ಎಸ್‌ಎಸ್ ಗಲಭೆ ಸೃಷ್ಟಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಶೆಟ್ಟರ್, ಅಲ್ಪಸಂಖ್ಯಾತ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ನಾಯಕರು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಗಲಭೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನು ರೀತ್ಯ ಶಿಕ್ಷೆ ನೀಡಲಿ. ಅದನ್ನು ಬಿಟ್ಟು ಜವಾಬ್ದಾರಿ ಸ್ಥಾನದಲ್ಲಿರುವ ಹರಿಪ್ರಸಾದ್ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಲಿ ಎಂದರು.ರಾಜ್ಯ ಸರ್ಕಾರದ ಪ್ರಸ್ತಾವನೆಯ ಮೇರೆಗೆ ಮೆಟ್ರೋ ದರ ಏರಿಕೆಯಾಗಿದೆ. ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ದರ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ದರ ಏರಿಕೆ ಮಾಡುವುದಾಗಿದ್ದರೆ ದೆಹಲಿ, ಮುಂಬೈನಲ್ಲೂ ದರ ಏರಿಕೆ ಆಗಬೇಕಿತ್ತು. ಆದರೆ, ಅದ್ಯಾವುದು ಆಗಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.