ಸಾರಾಂಶ
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತುಂಬಾ ಅಚ್ಚುಕಟ್ಟಾಗಿ ಕಾರ್ಮಿಕರಿಗೆ ಅನೂಕೂಲ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮೈಸೂರು ಜಿಲ್ಲಾ ಕಟ್ಟಡ ಮತ್ತು ಇತರೆ ಕೆಲಸಗಾರರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸಿ, ಅರ್ಹ ಫಲಾನುಭವಿಗಳಿಗೆ ಟೂಲ್ ಕಿಟ್ ವಿತರಿಸಿದರು.ನಂತರ ಕೆ. ಹರೀಶ್ ಗೌಡ ಮಾತನಾಡಿ, ನಮ್ಮ ಸರ್ಕಾರ ಕಾರ್ಮಿಕರ ಪರವಾಗಿ ಇದೆ. ಹೀಗಾಗಿಯೇ, ಅಸಂಘಟಿಗ ಕಾರ್ಮಿಕ ವಲಯಕ್ಕೆ ಆರೋಗ್ಯ ತಪಾಸಣೆ ಸೇರಿದಂತೆ, ನೊಂದಾಯಿತ ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಮದುವೆಗೆ ಧನ ಸಹಾಯ, 60 ವರ್ಷ ದಾಟಿದ ನೊಂದಾಯಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತುಂಬಾ ಅಚ್ಚುಕಟ್ಟಾಗಿ ಕಾರ್ಮಿಕರಿಗೆ ಅನೂಕೂಲ ಮಾಡುತ್ತಿದ್ದಾರೆ. ಹೀಗಾಗಿ ನೋಂದಣಿ ಆಗದ ಕಾರ್ಮಿಕರಲ್ಲಿ ಅರಿವು ಮೂಡಿಸಿ, ಎಲ್ಲರೂ ನೊಂದಣಿ ಆಗುವಂತೆ ಮಾಡಿ ಎಂದು ಅವರು ಮನವಿ ಮಾಡಿದರು.ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಚೇತನ್ ಕುಮಾರ್, ವೀಣಾ, ಜಯಣ್ಣ, ಮಾದಪ್ಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಿದ್ದೇಗೌಡ, ಗೌರವ ಅಧ್ಯಕ್ಷ ನಿಂಗೇಗೌಡ, ಪದಾಧಿಕಾರಿಗಳಾದ ಸಣ್ಣಪ್ಪ, ವೆಂಕಟೇಶ್, ಪರಮೇಶ್, ಕೃಷ್ಣಪ್ಪ, ನಾಗರಾಜು, ರಾಜಗಣೇಶ್, ಕುಮಾರ್ ಮೊದಲಾದವರು ಇದ್ದರು.