35ನೇ ಗೇಟ್ ಫ್ಲೈ ಓವರ್ ಕಾಮಗಾರಿಗೆ ಶೀಘ್ರ ಚಾಲನೆ

| Published : Feb 17 2025, 12:33 AM IST

ಸಾರಾಂಶ

ಶೀಘ್ರದಲ್ಲೆ ಪಟ್ಟಣದ ರೈಲ್ವೆ ಇಲಾಖೆಯ ಎಲ್‌ಸಿ 35 ಗೇಟ್ ಫ್ಲೈ ಓವರ್ ಕಾಮಗಾರಿಗೆ ಚಾಲನೆ ನೀಡಲಾಗುವುದು

ಹಗರಿಬೊಮ್ಮನಹಳ್ಳಿ: ಶೀಘ್ರದಲ್ಲೆ ಪಟ್ಟಣದ ರೈಲ್ವೆ ಇಲಾಖೆಯ ಎಲ್‌ಸಿ 35 ಗೇಟ್ ಫ್ಲೈ ಓವರ್ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಈ.ತುಕಾರಾಂ ಹೇಳಿದರು.

ಪಟ್ಟಣದ ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ನಿವಾಸಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಕೂಡಲೇ ಎಲ್‌ಸಿ 37 ಗೇಟ್ ಫ್ಲೈ ಓವರ್ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುವುದು. ಚುನಾವಣೆ ವೇಳೆ ನೀಡಿದ ಭರವಸೆಯಂತೆ ತಂಬ್ರಹಳ್ಳಿ ಪದವಿ ಕಾಲೇಜು ಸ್ಥಾಪನೆಗೆ ಪೂರಕ ಯತ್ನ ನಡೆಸಲಾಗುವುದು. ಸಾಧ್ಯವಾದರೆ ವಿ.ವಿ.ಸಂಘದಿಂದ ಪದವಿ ಕಾಲೇಜು ಆರಂಭಿಸಿದರೆ ಕಟ್ಟಡ ನಿರ್ಮಾಣಕ್ಕೆ ₹1.5 ಕೋಟಿ ಅನುದಾನ ನೀಡಲಾಗುವುದು. ಸರ್ಕಾರಿ ಪದವಿ ಕಾಲೇಜು ಸ್ಥಾಪನೆಯಾದರೆ ಮಾತ್ರ ಸುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಖಾಸಗಿ ಕಾಲೇಜುಗಳಿಂದ ಹೆಚ್ಚುವರಿ ಶುಲ್ಕ ಭರಿಸುವಂತಾಗಲಿದೆ. ಸಿಬ್ಬಂದಿ ನೇಮಕ, ನ್ಯಾಕ್ ಅನುದಾನವೂ ಪೂರಕವಾಗಲಿದೆ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಒತ್ತಾಯಿಸಿದಾಗ, ಸಂಸದರು ಕೆಎಂಎಫ್ ಅಧ್ಯಕ್ಷರೊಂದಿಗೆ ಸಿಎಂ ಬಳಿ ಚರ್ಚಿಸಲಾಗುವುದು ಎಂದರು.

ತಾಲೂಕಿನ ಆನೇಕಲ್ಲು ತಾಂಡಾದ ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉತ್ತಮ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗುವುದು. ಅಖಂಡ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಆನೇಕಲ್ ತಾಂಡದ ಜನರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ತೀವ್ರ ಒತ್ತಾಯಿಸುವುದನ್ನು ಕಂಡು ಸಂಸದರು ಪ್ರಶಂಸಿಸಿದರು.

ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಮುಖಂಡರಾದ ಡಿಶ್ ಮಂಜುನಾಥ, ಬಾಲಕೃಷ್ಣಬಾಬು, ಬಾವಿಷ್ಯ ನಾಯ್ಕ, ಪಾಂಡು ನಾಯ್ಕ, ಪಂಪಾ ನಾಯ್ಕ, ಸುಬ್ರಮಣಿ ನಾಯ್ಕ, ಮಂಜು ನಾಯ್ಕ, ಕೊಟ್ರೇಶ್‌ ನಾಯ್ಕ, ಪರಮೇಶ ನಾಯ್ಕ ಇದ್ದರು.ಹಗರಿಬೊಮ್ಮನಹಳ್ಳಿ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಕಚೇರಿಯಲ್ಲಿ ಸಂಸದ ಈ.ತುಕಾರಾಂ ವಿವಿಧ ಗ್ರಾಮಸ್ಥರೊಂದಿಗೆ ಚರ್ಚಿಸಿದರು.