ಸಂಪುಟ ಪುನಾರಚಣೆ ಬಗ್ಗೆ ಜ. 10ನೇ ತಾರೀಕಿನ ನಂತರ ಚರ್ಚೆ ಆಗಲಿದೆ. ಶೇ. 50ರಷ್ಟು ಸಚಿವರನ್ನು ಪಕ್ಷಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ, ಹೊಸಬರಿಗೆ ಅವಕಾಶ ಕೊಡಿ ಎಂದು ತಿಳಿಸಿದ್ದೇವೆ. ಹಾವೇರಿ ಜಿಲ್ಲೆಗೆ ಮಂತ್ರಿಗಿರಿ ಸಿಗಬೇಕಿದೆ ಎಂದು ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.

ಹಾವೇರಿ: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷದಲ್ಲಿ ಯಾವ ಘನ ಕಾರ್ಯವನ್ನೂ ಮಾಡಿಲ್ಲ. ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮಂತ್ರಿಗಳು ನಮಗೆ ಸಹಕಾರ ಕೊಡುತ್ತಿಲ್ಲ. ರಾಜ್ಯದ ಸಂಸದರು ಅನುದಾನ ತರಲು ವಿಫಲವಾಗಿದ್ದಾರೆ. ನಮ್ಮ ಬಗ್ಗೆ ಮಾತನಾಡೋದು ಎಷ್ಟು ಸಮಂಜಸ? ರಾಜ್ಯ ಸರ್ಕಾರದ ಬೊಕ್ಕಸ ಏನೂ ಖಾಲಿಯಾಗಿಲ್ಲ. ಜಾತಿ ಧರ್ಮ ನೋಡದೇ ಎಲ್ಲರಿಗೂ ಪಂಚ ಗ್ಯಾರಂಟಿ ಯೋಜನೆಯನ್ನು ಕೊಟ್ಟಿದ್ದೇವೆ ಎಂದರು.

ನಮ್ಮ ಮುಖ್ಯಮಂತ್ರಿ ನುಡಿದಂತೆ ನಡೆದಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಕಾರ್ಯಕ್ರಮ ನೀಡಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಇಂದು ವಿಶೇಷ ದಿನ. ಸಿದ್ದರಾಮಯ್ಯ ಅವರಿಗೆ ಶುಭ ಕೋರುವೆ. ಅವರು ಇನ್ನಷ್ಟು ಜನರ ಸೇವೆ ಮಾಡಲಿ ಎಂದರು.

ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಪೂರೈಸುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲ ಹೈಕಮಾಂಡ್ ನಿರ್ಣಯಿಸುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವರ್ಕಿಂಗ್ ಕಮಿಟಿ ತೀರ್ಮಾನ ಮಾಡುತ್ತದೆ. ನಾವು ಪ್ರಾಮಾಣಿಕ ಜನ ಸೇವೆ ಮಾಡುತ್ತಿದ್ದೇವೆ ಎಂದರು.

ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಜ. 10ನೇ ತಾರೀಕಿನ ನಂತರ ಚರ್ಚೆ ಆಗಲಿದೆ. ಅಂತಿಮ ತೀರ್ಮಾನ ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ. ಈಗಾಗಲೇ ನಾವು ಕೂಡ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಶೇ. 50ರಷ್ಟು ಸಚಿವರನ್ನು ಪಕ್ಷಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ, ಹೊಸಬರಿಗೆ ಅವಕಾಶ ಕೊಡಿ ಎಂದು ತಿಳಿಸಿದ್ದೇವೆ. ಹಾವೇರಿ ಜಿಲ್ಲೆಗೆ ಮಂತ್ರಿಗಿರಿ ಸಿಗಬೇಕಿದೆ. 2023ರಲ್ಲೇ ನನಗೆ ಸಚಿವ ಸ್ಥಾನದ ಅವಕಾಶ ಸಿಗಬೇಕಿತ್ತು. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದರು.

ವೋಟ್ ಚೋರಿ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಎರಡೂವರೆ ಕೋಟಿ ಮತದಾರರ ವೋಟ್ ಚೋರಿಯಿಂದಲೇ ಬಿಜೆಪಿಯವರು ಗೆಲ್ಲುತ್ತಿದ್ದಾರೆ. ದೇಶದಲ್ಲಿ ಎಲೆಕ್ಷನ್ ಕಮಿಷನ್ ಸತ್ತು ಹೋಗಿದೆ. ಚುನಾವಣಾ ಆಯೋಗ ಬಿಜೆಪಿ ಕಪಿಮುಷ್ಟಿಯಲ್ಲಿದೆ. ಬಿಹಾರದಲ್ಲಿ 60 ಲಕ್ಷ ವೋಟ್ ಚೋರಿ ಮಾಡಿದ್ದಾರೆಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣ ಕುರಿತು ಮಾತನಾಡಿ, ನನಗಿರುವ ಮಾಹಿತಿ ಪ್ರಕಾರ ಮಹಿಳೆ ಹೆಬಿಚುವಲ್ ಅಫೆಂಡರ್. ಆಕೆಯ ಮೇಲೆ ಸುಮಾರು 10 ಕೇಸ್ ಇದೆ. ಅವರು ಕಾನ್‌ಸ್ಟೆಬಲ್‌ಗಳಿಗೆ ಹಲ್ಲೆ ಮಾಡೋಕೆ ಹೋಗಿದ್ದರೆಂಬ ಮಾಹಿತಿ ಇದೆ. ಹಾಗಾಗಿ ಅದಾಗಿದೆ, ತನಿಖೆ ಆಗಿ ಶಿಕ್ಷೆಯಾಗುತ್ತದೆ. ಬಿಜೆಪಿಯವರು ಈ ಬಗ್ಗೆ ಏನೂ ಗೊತ್ತಿಲ್ಲದೇ ಕೂಡಲೇ ಸ್ಟೇಟ್‌ಮೆಂಟ್ ಕೊಡುತ್ತಾರೆ ಎಂದರು.