ಗುರುವಿನಹಳ್ಳಿಯ ಗಮಕ ಕಲಾರತ್ನ ವಿಶ್ವನಾಥ್ ಕುಲಕರ್ಣಿ ಅವರು, ಗದುಗಿನ ಭಾರತದ ಮಹಾಕಾವ್ಯದ ಪಾಶುಪತಾಸ್ತ್ರ ಪ್ರದಾನ ಪ್ರಸಂಗವನ್ನು ಆಯ್ದುಕೊಂಡು ವಾಚನ ವ್ಯಾಖ್ಯಾನವನ್ನು ಗೈದರು. ಇವರಿಗೆ ಸಂಗೀತ ಶಿಕ್ಷಕ ಶ್ರೀಕಾಂತ ಹೂಲಿ ಅವರು ಸಂವಾದಿನಿ ಸಾಥ್ ನೀಡಿದರು.
ಗದಗ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಯೋಗಶೀಲ ಹಾಗೂ ಶಬ್ದ ಸೃಷ್ಟಿಯಿಂದ ತನ್ನದೇ ಆದ ಛಾಪು ಮೂಡಿಸಿದ ಕವಿ ಕುಮಾರವ್ಯಾಸ, ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಜಗದ ಕವಿ ಯುಗದ ಕವಿ ಎಂದು ಅಡವಿಂದ್ರ ಸ್ವಾಮಿಮಠದ ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.ನಗರದ ಅಡವೀಂದ್ರಸ್ವಾಮಿ ಮಠದ ಶಿವಾನುಭವ ಸಮಿತಿಯು ಜಿಲ್ಲಾ ಸಂಸ್ಕಾರ ಭಾರತಿ ಸಹಯೋಗದಡಿ 343ನೇ ಮಾಸಿಕ ಶಿವಾನುಭವದಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಗದುಗಿನ ಭಾರತ ವಾಚನ- ವ್ಯಾಖ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಮಾರವ್ಯಾಸ ಕರ್ನಾಟಕ ಭಾರತ ಕಥಾಮಂಜರಿ ಕೃತಿಯಿಂದ ಕನ್ನಡಿಗರ ಸಾಹಿತ್ಯ ಸ್ಮೃತಿಯಲ್ಲಿ ಚಿರಸ್ಥಾಯಿಯಾಗಿ ಉಳಿದು ಗದಗ ಹಾಗೂ ವೀರನಾರಾಯಣನನ್ನು ಭಾರತದ ನಕ್ಷೆಯಲ್ಲಿ ಅಜರಾಮರಗೊಳಿಸಿದ್ದಾರೆ ಎಂದರು.ಗುರುವಿನಹಳ್ಳಿಯ ಗಮಕ ಕಲಾರತ್ನ ವಿಶ್ವನಾಥ್ ಕುಲಕರ್ಣಿ ಅವರು, ಗದುಗಿನ ಭಾರತದ ಮಹಾಕಾವ್ಯದ ಪಾಶುಪತಾಸ್ತ್ರ ಪ್ರದಾನ ಪ್ರಸಂಗವನ್ನು ಆಯ್ದುಕೊಂಡು ವಾಚನ ವ್ಯಾಖ್ಯಾನವನ್ನು ಗೈದರು. ಇವರಿಗೆ ಸಂಗೀತ ಶಿಕ್ಷಕ ಶ್ರೀಕಾಂತ ಹೂಲಿ ಅವರು ಸಂವಾದಿನಿ ಸಾಥ್ ನೀಡಿದರು.ಈ ವೇಳೆ ಹಿರಿಯ ನಾಗರಿಕ ಸೇವಾ ರಾಜ್ಯ ಪ್ರಶಸ್ತಿ ಪಡೆದ ನಿಮಿತ್ತ ಬಿ.ಡಿ. ಕಿಲಬನವರ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಟ್ರೋಫಿ ವಿಜೇತ ವೇದಾಂತ ರಾಜು ಸಿಕ್ಕಲಗಾರ ಅವರನ್ನು ಸನ್ಮಾನಿಸಲಾಯಿತು. 80 ವಸಂತ ಪೂರೈಸಿದ ಶ್ರೀಮಠದ ಶಿವಾನುಭವ ಸಮಿತಿಯ ಮಾಜಿ ಅಧ್ಯಕ್ಷ ನಿಂಗಪ್ಪ ಬಳಿಗಾರ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಮದರಿಮಠ ದಂಪತಿಗಳನ್ನು ಸನ್ಮಾನಿಸಲಾಯಿತು.ಸಾನ್ನಿಧ್ಯವನ್ನು ಅಡವೀಂದ್ರ ಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ವಹಿಸಿದ್ದರು. ಎಸ್.ಪಿ. ಸಂಶಿಮಠ, ವೆಂಕಟೇಶ್ ಕುಲಕರ್ಣಿ, ಪ್ರೊ ಕೆ.ಎಚ್. ಬೇಲೂರ, ಬಿ.ಎಂ. ಬಿಳೆಯಲಿ, ಸುಧೀರ್ ಸಿಂಹ ಘೋರ್ಪಡೆ, ಪ್ರಭುಗೌಡ ಪಾಟೀಲ್, ಗುರಪ್ಪ ನಿಡಗುಂದಿ, ಶಾಂತಾ ಸಂಕನೂರ, ಗಜಾನನ ವೇರ್ಣೆಕರ್, ಮಂಜುನಾಥ ಕಿಲಬನವರ ಸೇರಿದಂತೆ ಅನೇಕರು ಇದ್ದರು. ಗೀತಾ ಹೂಗಾರ ಪ್ರಾರ್ಥಿಸಿದರು. ಡಾ. ದತ್ತ ಪ್ರಸನ್ನ ಪಾಟೀಲ ಸ್ವಾಗತಿಸಿದರು. ಜಿ.ಎಂ. ಯಾನಮಶೆಟ್ಟಿ ಪರಿಚಯಿಸಿದರು. ಉಪನ್ಯಾಸಕ ಪ್ರಕಾಶ ಬಂಡಿ ನಿರೂಪಿಸಿದರು. ವೀರೇಶ್ವರ ಸ್ವಾಮಿ ಹೊಸಳ್ಳಿಮಠ ವಂದಿಸಿದರು.