ಸಾರಾಂಶ
- ಯಾದಗಿರಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪ
--ಕನ್ನಡಪ್ರಭವಾರ್ತೆ ಯಾದಗಿರಿ
ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ಬೀದಿಗೆ ಬಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದರು.ಯಾದಗಿರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ. ಆದರೆ, ಅದರ ಸಾಲವನ್ನು ರಾಜ್ಯದ ಶ್ರೀಸಾಮಾನ್ಯ ತೆರಿಗೆ ಹಣದಿಂದಲೇ ಭರಿಸಬೇಕಿದೆ. ಪಡಿತರ ಅಕ್ಕಿಯನ್ನು ನೀಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಈ ಸರ್ಕಾರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮೂಡಾದಲ್ಲಿ ಏನು ಅಕ್ರಮ ನಡೆದೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ, ವಕ್ಫ್ ಮಂಡಳಿಗೆ ಬಿಜೆಪಿ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೊಸ ಕಥೆ ಕಟ್ಟಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಇಂಥ ಕೆಲಸ ನಾವು ಮಾಡಿಲ್ಲ. ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ಈ ಸಭೆ ನಡೆಸಲಾಗಿದೆ ಎಂದು ನಡುವಳಿಯಲ್ಲಿ ಬರೆಸಿದ್ದಾರೆ. ಹೀಗಾಗಿ ಜಮೀರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.ವಕ್ಫ್ ಹಗರಣವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಡಿ.4ರಂದು ಬೀದರ್ ಮತ್ತು ಕಲಬುರಗಿಯಲ್ಲಿ ಹೋರಾಟ ನಡೆಸಲಿದ್ದಾರೆ. 5ರಂದು ಬೆಳಗ್ಗೆ ಯಾದಗಿರಿಗೆ ಆಗಮಿಸಲಿದ್ದಾರೆ. ಸರ್ಕಾದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ನಾವು ಸದನದ ಹೊರಗೆ ಮತ್ತು ಒಳಗೆ ಹೋರಾಟ ನಡೆಸಲಿದ್ದೇವೆ ಎಂದರು.
ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ನಡೆದಿಲ್ಲ. ವಕ್ಫ್ ಹೋರಾಟಕ್ಕೆ ಬಿಜೆಪಿ ವರೀಷ್ಠರು ರಾಜ್ಯಾದ್ಯಂತ ಮೂರು ತಂಡ ರಚಿಸಿದ್ದಾರೆ. ಅದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ತಂಡವಿದೆ ಎಂದ ರಾಜೀವ್, ಬಿಜೆಪಿಯಲ್ಲಿ ಕೆಲ ಭಿನ್ನಮತ ನಡೆಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಒಪ್ಪಿಕೊಂಡರು.ಬೀದರ್ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ), ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಅಲೆಮಾರಿ-ಅರೆ ಅಲೆಮಾರಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ಶರಣು ತಳ್ಳಿಕೇರಿ, ಪ್ರಮುಖರಾದ ನಾಗರತ್ನ ಕುಪ್ಪಿ, ರಾಚನಗೌಡ ಮುದ್ನಾಳ, ಮಹೇಶರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಮೇಲಪ್ಪ ಗುಳಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಎಚ್.ಸಿ.ಪಾಟೀಲ್, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ ಇದ್ದರು.
----29ವೈಡಿಆರ್12 : ಯಾದಗಿರಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪತ್ರಿಕಾಗೋಷ್ಠಿ ನಡೆಸಿದರು.