ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸುಸಂಸ್ಕೃತ ಬದುಕನ್ನು ಕಲಿಸುವುದರ ಜೊತೆಗೆ ಸ್ಫೂರ್ತಿಯನ್ನು ನೀಡುವ ಕಲೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು.ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾ ಮಂಟಪ ಮೈಸೂರು ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ರಂಗೋತ್ಸವದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಕಲೆಗಳಿಗೂ ಒಂದೊಂದು ಸ್ಥಾನವಿದೆ, ಅದರಲ್ಲಿ ನಾಟಕ ಕಲೆಗೆ ವಿಶೇಷ ಸ್ವಾನವಿದೆ. ಪಠ್ಯಕ್ಕೆ ಸಿಮೀತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಂಡಾಗ ಜ್ಞಾನಾರ್ಜನೆ ಹೆಚ್ಚುತ್ತದೆ ಎಂದರು.
ಡಾ.ರಾಜ್‌ಕುಮಾರ್ ಕಲಾಮಂದಿರವನ್ನು ಸುವ್ಯಸ್ಥೆಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಲವು ಯೋಜನೆಗಳನ್ನು ರೂಪಿಸಿದ್ದು, ಎಲ್ಲ ರಂಗಕರ್ಮಿಗಳು ಸಲಹೆ ಸೂಚನೆ ನೀಡಿದರೆ ಅದರ ಪ್ರಕಾರ ಅಭಿವೃದ್ಧಿಗೊಳಿಸುವ ಭರವಸೆ ನೀಡಿದರು. ಮೂರು ದಿನಗಳ ಕಾಲ ಬಹಳ ಅರ್ಥಪೂರ್ಣವಾಗಿ ರಂಗೋತ್ಸವ ನಡೆದಿದೆ. ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಜೀವನದಲ್ಲಿ ಎಷ್ಟೇ ಹಣ ಸಂಪಾದನೆ ಮಾಡಿದರೂ, ಕಲೆಯಿಂದ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಓದಿನ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಸಲಹೆ ನೀಡಿದರು.ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಸಮಾರೋಪ ಭಾಷಣ ಮಾಡಿ, ಯಾವ ಊರಿನಲ್ಲಿ ರಂಗಭೂಮಿಯ ಕೆಲಸ ನಡೆಯುತ್ತಿದೆಯೋ ಅಲ್ಲಿನ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ನಾಟಕಗಳಿಂದ ಒಬ್ಬ ಮನುಷ್ಯ ಪರಿಪೂರ್ಣವಾಗುತ್ತಾನೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಶಿಕ್ಷಣ, ಆರೋಗ್ಯ ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದೆ. ಅದರಲ್ಲೂ ರಂಗಭೂಮಿಯಲ್ಲಿ ಮಕ್ಕಳನ್ನು ತೊಡಗಿಸುತ್ತಿರುವುದು ಸಂತಸದ ವಿಚಾರ ಎಂದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ನಾಟಕ ಆಕಾಡೆಮಿ ಸದಸ್ಯ ಎಸ್.ರಾಮು ಮಾತನಾಡಿ, ನಾಟಕ ಎಂದರೆ ಸತ್ಯ-ಸುಳ್ಳುಗಳನ್ನು ಮುಖಾಮುಖಿ ಮಾಡಿ ಚರ್ಚೆ ನಡೆಸಿ, ಜನರ ಮನಸ್ಸಿನ ಮೇಲೆ, ಪ್ರಭಾವ ಬೀರಿ, ಒಳ್ಳೆಯದನ್ನು ಪ್ರಚುರಪಡಿಸಿ, ಕಲೆಯ ಮೂಲಕ ಸತ್ಯವನ್ನು ಪ್ರತಿಷ್ಠಾಪಿಸುವುದೇ ಆಗಿದೆ, ಆದ್ದರಿಂದಲೇ ಕಲೆಗಳಲ್ಲಿ ರಂಗಭೂಮಿಗೆ ವಿಶಿಷ್ಟವಾದ ಸ್ಥಾನವಿದೆ ಎಂದರು.ಮನುಷ್ಯನನ್ನು ಮನುಷ್ಯನ್ನಾಗಿ ರೂಪಿಸುವುದೇ ರಂಗಭೂಮಿ, ನಡೆ-ನುಡಿಯನ್ನು ಕಲಿಸುವುದೇ ರಂಗಭೂಮಿ, ನಡೆ ನುಡಿ ಶುದ್ಧಿಯಾಗಿದ್ದರೆ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ೧೨ನೇ ಶತಮಾನದ ಮಹಾಮನೆ ರೀತಿ ರಂಗಕಲೆ ಎಂದರು.ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಎಂ.ಪಿ.ರಾಜು, ನಾಟಕ ಅಕಾಡೆಮಿ ಪುರಸ್ಕೃತ ಚಂದ್ರಶೇಖರ ಹೆಗ್ಗೋಠಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು, ಜೆಎಸ್‌ಎಸ್ ರಂಗೋತ್ಸವ ಸಂಚಾಲಕ ಚಂದ್ರಶೇಖರ್ ಹೆಗ್ಗೋಠಾರ ರಂಗೋತ್ಸವ ಬಗ್ಗೆ ವರದಿ ಮಂಡಿಸಿದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹಾದೇವಸ್ವಾಮಿ ಉಪಸ್ಥಿತರಿದ್ದರು. ಕೆ.ಎಸ್.ಅರುಣಾಶ್ರೀ ಸ್ವಾಗತಿಸಿದರು, ಮಹದೇವಸ್ವಾಮಿ ನಿರೂಪಿಸಿದರು, ಡಾ.ಸುಷ್ಮಾ ವಂದಿಸಿದರು.