ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಜ.16ರಂದು ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಜಕ್ಕನಕಟ್ಟಿಯ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆ 9ನೇ ತರಗತಿ ವಿದ್ಯಾರ್ಥಿನಿ ಕು.ಅನುಷಾ ಕರಿಬಸಯ್ಯ ಹಿರೇಮಠ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಜ.16ರಂದು ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಜಕ್ಕನಕಟ್ಟಿಯ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆ 9ನೇ ತರಗತಿ ವಿದ್ಯಾರ್ಥಿನಿ ಕು.ಅನುಷಾ ಕರಿಬಸಯ್ಯ ಹಿರೇಮಠ ಉದ್ಘಾಟಿಸಲಿದ್ದಾರೆ.

ಶ್ರೀಮಠದ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಶಕುನವಳ್ಳಿ ಮೂಲದ ಹಾಲಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ವಾಸಿ ಕರಿಬಸಯ್ಯ ಶಾಂತಯ್ಯ ಹಿರೇಮಠ ಮತ್ತು ಶಿಲ್ಪ ಕರಿಬಸಯ್ಯ ದಂಪತಿ ಪುತ್ರಿ ಕು.ಅನುಷಾ ಕರಿಬಸಯ್ಯ ಹಿರೇಮಠ ಉದ್ಘಾಟನೆ ಮಾಡಲಿದ್ದಾರೆ.

ಅನುಷಾ ಕರಿಬಸಯ್ಯ ಹಿರೇಮಠ ಅವರು ಆಡೂರಿನ ಶ್ರೀವರದಾ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡಿ, ಪ್ರಸ್ತುತ ಶಿಗ್ಗಾಂವ್ ತಾಲೂಕಿನ ಜಕ್ಕನಕಟ್ಟಿಯ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಯಲ್ಲಿ ೯ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಬಾಲ್ಯದಿಂದಲೇ ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿರುವ ಕು.ಅನುಷಾ ಕರಿಬಸಯ್ಯ ಹಿರೇಮಠ ಓದಿನಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ.

ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಇವರು ಜಾನಪದ ನೃತ್ಯವಾದ ಬಯಲಾಟ, ಚಾಲುಕ್ಯರ ಉತ್ಸವ, ಹಂಪಿ ಉತ್ಸವ ಹಾಗೂ ಬಿಜಾಪುರ ಉತ್ಸವಕ್ಕೆ ಆಯ್ಕೆಯಾಗಿದ್ದರು. ಇವರು ಬರೆದಿರುವ ಹಲವು ಲೇಖನಗಳು ಕಳೆದ 2024ರಲ್ಲಿ ತರಂಗ ಸೇರಿದಂತೆ ರಾಜ್ಯ ಮಟ್ಟದ ಕೆಲ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕರಾಟೆ ಮತ್ತು ಖೋ ಖೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಇವರು ಕನ್ನಡ ರಾಮಯ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ಮಾಡಿದ್ದಾರೆ. ಅಲ್ಲದೆ ಕೆಲ ಖಾಸಗಿ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿದ್ದಾರೆ. ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಇವರು, ಹಲವು ಬಹುಮಾನ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಕನ್ನಡದ ಕಣ್ಮಣಿ, ಕನ್ನಡ ಭೂಷಣ, ಜನದನಿ ರತ್ನ, ಕನ್ನಡ ಮಾಣಿಕ್ಯ, ಕನ್ನಡ ಕಲಾ ರತ್ನ, ಕನ್ನಡ ಸೇವಾ ರತ್ನ, ಶ್ರಮಜೀವಿ, ರಾಜ್ಯ ಕಲಾ ಮಾಣಿಕ್ಯ, ಸಾವಿತ್ರಿಬಾಯಿಪುಲೆ, ಸ್ಟಾರ್ ಆಫ್ ಕರ್ನಾಟಕ, ಬಸವಚೇತನ, ಕರುನಾಡ ಜ್ಯೋತಿ, ಕರ್ನಾಟಕ ಕಲಾ ರತ್ನ, ಕನ್ನಡ ಗ್ರಾಮೀಣ ರತ್ನ, ರಾಜ್ಯ ಕಲಾ ಮಾಣಿಕ್ಯ ಸೇವಾರತ್ನ, ಭಾರತ ಸೇವಾ ರತ್ನ, ಕರುನಾಡ ಸಾಧಕರು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮುಡಿಗೇರಿಸಿಕೊಂಡಿದ್ದಾರೆ.