ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಡಬೂರು ಗ್ರಾಮದಲ್ಲಿ ಕಳೆದ 15 ದಿನದಿಂದ 16 ಕಾಡಾನೆಗಳ ಹಿಂಡು ಓಡಾಡುತ್ತಾ ಅಡಕೆ ಸಸಿಗಳನ್ನು ಮುರಿದು ಹಾಕುತ್ತಿದ್ದು ರೈತರಲ್ಲಿ ಆತಂಕ ಇಮ್ಮಡಿಸಿದೆ.

- 16 ಆನೆಗಳ ಹಿಂಡು ವನಮಾಲಮ್ಮ ತೋಟದಲ್ಲಿ 400 ಅಡಿಕೆ ಸಸಿ ದ್ವಂಸ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮಡಬೂರು ಗ್ರಾಮದಲ್ಲಿ ಕಳೆದ 15 ದಿನದಿಂದ 16 ಕಾಡಾನೆಗಳ ಹಿಂಡು ಓಡಾಡುತ್ತಾ ಅಡಕೆ ಸಸಿಗಳನ್ನು ಮುರಿದು ಹಾಕುತ್ತಿದ್ದು ರೈತರಲ್ಲಿ ಆತಂಕ ಇಮ್ಮಡಿಸಿದೆ.

16 ಕಾಡಾನೆಗಳಿರುವ ಈ ಹಿಂಡಿನಲ್ಲಿ 4 ಮರಿ ಆನೆ ಇದ್ದು ಎಲ್ಲಾ ಕಾಡಾನೆಗಳು ಒಟ್ಟಾಗಿ ರಾತ್ರಿ ಸಮಯದಲ್ಲಿ ತೋಟದಿಂದ ತೋಟಕ್ಕೆ ಸುತ್ತಾಡುತ್ತ ಅಡಕೆ ತೋಟ ದ್ವಂಸ ಮಾಡುತ್ತಿವೆ. ಹಗಲು ಹೊತ್ತಿನಲ್ಲಿ ಕಾಡಿಗೆ ಸೇರುತ್ತಿದೆ. ಅರಣ್ಯ ಇಲಾಖೆಯವರು ಮಡಬೂರು ಗ್ರಾಮದಲ್ಲಿ ಸುತ್ತಾಡುತ್ತಿರುವ ಕಾಡಾನೆಗಳನ್ನು ಓಡಿಸಬೇಕು ಎಂದು ಮಡಬೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಂಗಳವಾರ ರಾತ್ರಿ ಮಡಬೂರು ವನಮಾಲಮ್ಮ ಎಂಬ ರೈತರ ಅಡಕೆ ತೋಟಕ್ಕೆ ನುಗ್ಗಿದ 16 ಕಾಡಾನೆಗಳ ಹಿಂಡು 4 ರಿಂದ 5 ವರ್ಷದ 400ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ದ್ವಂಸ ಮಾಡಿವೆ. ಸಮೀಪದ ರವಿ ಎಂಬುವರ ತೋಟದ ಒಳಗೆ ನುಗ್ಗಿ ಮುಂದೆ ಹೋಗಿದೆ. ಅಲ್ಲದೆ ಮಡಬೂರು ಗ್ರಾಮದ ನೇರ್ಲೆ ಸತೀಶ್ ಗೌಡ, ಮಂಜುನಾಥ ಗೌಡ, ನರೇಂದ್ರಗೌಡ, ಸಂಘರ್ಷ ಅವರ ಅಡಕೆ ತೋಟಗಳಿಗೂ ನುಗ್ಗಿದ ಕಾಡಾನೆಗಳ ಹಿಂಡು ನೂರಾರು ಅಡಕೆ ಮರಗಳನ್ನು ನಾಶ ಮಾಡಿವೆ. ಮಡಬೂರು ಗ್ರಾಮದ ಎಕ್ಕಡ ಬೈಲು ಸೇರಿದಂತೆ ಮಡಬೂರು ಗ್ರಾಮದಲ್ಲೇ ಕಾಡಾನೆಗಳ ಹಿಂಡು ಸುತ್ತಾಡುತ್ತಿವೆ. ಆನೆಗಳ ಉಪಟಳದಿಂದ ಬೇಸತ್ತ ಜನ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.