ಸೆ. 22ರಿಂದ 25 ರವರೆಗೆ ರಾಜ್ಯ ಮಟ್ಟದ ದಸರಾ ಸಿಎಂಕಪ್ ಕ್ರೀಡಾಕೂಟ

| Published : Sep 19 2025, 01:00 AM IST

ಸಾರಾಂಶ

ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಗುರುತಿಸುವ ಸಲುವಾಗಿ ಪ್ರತಿ ವರ್ಷ ತಾಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಿದ್ದು, ಈ ಬಾರಿ ವಿಶೇಷವಾಗಿ ಸ್ಥಳೀಯರನ್ನು ಸಂಘಟಿಸಿ ಒಟ್ಟು 5 ವಿಭಾಗಗಳಲ್ಲಿ ಕ್ರೀಡಾಕೂಟ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಾಡಹಬ್ಬ ದಸರಾ‌ ಮಹೋತ್ಸವ ಅಂಗವಾಗಿ ರಾಜ್ಯ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟವು ಸೆ. 22 ರಿಂದ 25 ರವರೆಗೆ ನಡೆಯಲಿದ್ದು, ಸೆ. 22 ರಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟ ಉದ್ಘಾಟಿಸುವರು ಎಂದು ಇಲಾಖೆ ಆಯುಕ್ತ ಚೇತನ್‌ ಹೇಳಿದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡಾಪಟುಗಳ ಪ್ರತಿಭೆ ಗುರುತಿಸುವ ಸಲುವಾಗಿ ಪ್ರತಿ ವರ್ಷ ತಾಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಿದ್ದು, ಈ ಬಾರಿ ವಿಶೇಷವಾಗಿ ಸ್ಥಳೀಯರನ್ನು ಸಂಘಟಿಸಿ ಒಟ್ಟು 5 ವಿಭಾಗಗಳಲ್ಲಿ ಕ್ರೀಡಾಕೂಟ ನಡೆಸಲಾಗುತ್ತಿದೆ ಎಂದರು.

ವಿಭಾಗ ಮಟ್ಟದ ವಿಜೇತರು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು. ಸುಮಾರು ಒಂದು ವಿಭಾಗದಿಂದ 646 ಕ್ರೀಡಾಪಟುಗಳು (ಮಹಿಳಾ / ಪುರುಷ ಕ್ರೀಡಾಪಟುಗಳು ಸೇರಿದಂತೆ ಒಟ್ಟು 646) , ಒಟ್ಟು ಐದು ವಿಭಾಗಗಳಿಂದ 3,230 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಸುಮಾರು 800 ಮಂದಿ ತಾಂತ್ರಿಕ ಅಧಿಕಾರಿಗಳು, ಇಲಾಖೆ ತರಬೇತುದಾರರು, ಸಿಬ್ಬಂದಿ ಸೇವೆಯನ್ನು ಪಡೆಯಲಾಗುತ್ತಿದೆ ಎಂದರು.

ದಸರಾ ಕ್ರೀಡಾಕೂಟದಲ್ಲಿ ಒಟ್ಟು 26 ವಿವಿಧ ಕ್ರೀಡೆಗಳನ್ನು ಸೆ. 22 ರಿಂದ 25 ರವರೆಗೆ ಮೈಸೂರಿನ 13 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಕ್ರೀಡಾವಾರು ಸ್ಥಳಗಳ ವಿವರವನ್ನು ಅನುಬಂಧ - 01ರಲ್ಲಿ ಒದಗಿಸಿದೆ. ಈ ಕ್ರೀಡಾಕೂಟದ ಸಮರ್ಪಕ ಮತ್ತು ಯಶಸ್ವಿ ಸಂಘಟನೆಗಾಗಿ ಇಲಾಖಾ ಅಧಿಕಾರಿ, ಸಿಬ್ಬಂದಿ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು, ಸಿಬ್ಬಂದಿಯನ್ನು ಒಳಗೊಂಡಂತೆ ಕ್ರೀಡಾಕೂಟ ಸಂಘಟನೆ ಸಮಿತಿ, ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಆಹಾರ ಸಮಿತಿ, ಸಮವಸ್ತ್ರ, ವಿತರಣಾ ಸಮಿತಿ, ವೇದಿಕೆ ಸಿದ್ಧತಾ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವುದಾಗಿ ಅವರು ತಿಳಿಸಿದರು.

ಕ್ರೀಡಾಕೂಟದಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಸುಮಾರು ಒಂದು ವಿಭಾಗದಿಂದ 646 ಕ್ರೀಡಾಪಟುಗಳು ಭಾಗವಹಿಸಲಿದ್ದು, ಒಟ್ಟು 5 ವಿಭಾಗದಿಂದ ಒಟ್ಟು 3,230 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಕ್ರೀಡಾಕೂಟದಲ್ಲಿ ಒಟ್ಟು 26 ವಿವಿಧ ಕ್ರೀಡೆಗಳು ಮೈಸೂರಿನ 13 ಸ್ಥಳಗಳಲ್ಲಿ ಆಯೋಜಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಕ್ರೀಡಾ ಕ್ರೀಡಾಪಟುಗಳಿಗೆ ತಾಂತ್ರಿಕ ಅಧಿಕಾರಿಗಳಿಗೆ, ತರಬೇತುದಾರರಿಗೆ ಪ್ರತ್ಯೇಕವಾಗಿ ಗುಣಮಟ್ಟದ ವಸತಿ ವ್ಯವಸ್ಥೆಯನ್ನು ಕ್ರೀಡಾವಾರು ಖಾಸಗಿ 54 ವಸತಿಗೃಹಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸುಮಾರು 2000ಕ್ಕೂ ಹೆಚ್ಚು ಪದಕಗಳು, ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಕ್ರೀಡಾಕೂಟದ ಪೋರ್ಟಲ್‌ http://www.dasaracmcup.com/dyes ನಲ್ಲಿ ಕ್ರೀಡಾಪಟುಗಳ ಮಾಹಿತಿ, ಸ್ಪರ್ಧೆ ನಡೆಯುವ ಸ್ಥಳ, ಸ್ಪರ್ಧಾ ನಿರ್ದೇಶಕರ ವಿವರ, ಫಲಿತಾಂಶ ಸೇರಿದಂತೆ ಸಂಪೂರ್ಣ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕ್ರೀಡಾಪಟುಗಳಿಗೆ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರಚಾರ ಮತ್ತು ಮಾಧ್ಯಮ ಸಮನ್ವಯ ಸಮಿತಿ ಮತ್ತು ಸ್ಥಳೀಯವಾಗಿ ಸಂಘಟಿಸಲಾಗುವ ಕ್ರೀಡೆಗಳಾದ ಚೆಸ್‌, ಸೈಕಲ್‌ಪೋಲೋ, ಕರಾಟೆ, ಬಾಡಿ ಬಿಲ್ಡಿಂಗ್‌ಮತ್ತು ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಗಳು ನಡೆಯಲಿದೆ.

ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆಗೆ ಬಹುಮಾನ ನಿಗಧಿಪಡಿಸಲಾಗಿದ್ದು, ಮೊದಲನೇ ಬಹುಮಾನವಾಗಿ 10,000 ರು. ದ್ವಿತೀಯ ಬಹುಮಾನವಾಗಿ 7000 ರು. ಹಾಗೂ ತೃತೀಯ ಬಹುಮಾನವಾಗಿ 5000 ರೂ. ನಗದು ಬಹುಮಾನ ನೀಡಲಾಗುವುದು. ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ ಮೊದಲನೇ ಬಹುಮಾನ 8000 ರು., ದ್ವಿತೀಯ ಬಹುಮಾನ 5000 ರೂ. ಹಾಗೂ ತೃತೀಯ ಬಹುಮಾನ 2500 ರೂ. ನಗದು ಬಹುಮಾನ ನೀಡಲು ನಿಗದಿಪಡಿಸಲಾಗಿದೆ. ಅಂತೆಯೇ ಗುಂಪು ವಿಭಾಗದಲ್ಲಿ ನಡೆಯುವ ಸ್ಪರ್ಧೆಗೆ ಪ್ರತ್ಯೇಕ ನಗದು ಬಹುಮಾನ ನೀಡಲಾಗುವುದು ಎಂದರು.

ಕ್ರೀಡಾ ಕೂಟ ನಡೆಯುವ ಸ್ಥಳ:

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅರ್ಚರಿ, ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಫೆನ್ಸಿಂಗ್, ಜಿಮ್ನಾಸ್ಟಿಕ್, ಹ್ಯಾಂಡ್ ಬಾಲ್, ಹಾಕಿ, ಖೋ-ಖೋ, ನೆಟ್ ಬಾಲ್, ಈಜು, ಥ್ರೋ ಬಾಲ್, ವಾಲಿಬಾಲ್, ವುಷು ಸ್ಪರ್ಧೆ ಆಯೋಜಿಸಲಾಗಿದ್ದು, ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ, ಮೈಸೂರು ವಿಶ್ವ ವಿದ್ಯಾನಿಲಯದ ಪೆವಿಲಿಯನ್ ಹಾಕಿ ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಫುಟ್ ಬಾಲ್, ಕಬಡ್ಡಿ ಕ್ರೀಡೆ ನಡೆಯಲಿದೆ. ಮೈಸೂರು ವಿಶ್ವ ವಿದ್ಯಾನಿಲಯದ ಸ್ಪೋರ್ಟ್ ಪೆವಿಲಿಯನ್ ನ ಯೋಗ ಹಾಲ್ ನಲ್ಲಿ ಯೋಗ, ಮಹಾರಾಜ ಒಳಾಂಗಣ‌ ಕ್ರೀಡಾಂಗಟದಲ್ಲಿ ಜೂಡೋ, ಚಾಮರಾಜಪುರಂನ ಮೈಸೂರು ಟೆನ್ನಿಸ್ ಕ್ಲಬ್ ನಲ್ಲಿ ಲಾನ್ ಟೆನ್ನಿಸ್, ವಿಶ್ವೇಶ್ವರ‌ನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಟೇಬಲ್ ಟೆನ್ನಿಸ್, ಯುವರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಟೆಕ್ವಾಂಟೋ, ದೇವರಾಜ ಅರಸು ಕುಸ್ತಿ ಪೆವಿಲಿಯನ್ ಕ್ರೀಡಾಂಗಣದಲ್ಲಿ ಕುಸ್ತಿ ಸೇರಿದಂತೆ ರಿಂಗ್ ರಸ್ತೆಯಿಂದ ಸೈಕ್ಲಿಂಗ್ ಕ್ರೀಡಾ ಸ್ಪರ್ಧೆಗಳು‌ ನಡೆಯಲಿದ್ದು, ಆಯ್ಕೆಗೊಂಡಿರುವ ಸ್ಪರ್ಧಿಗಳು ತಮ್ಮ ಮಾಹಿತಿಯೊಂದಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ‌ ದಸರಾ‌ ಉಪ‌ ಸಮಿತಿ ವಿಶೇಷಾಧಿಕಾರಿ ಹಾಗೂ‌ ಮುಡಾ ಕಾರ್ಯದರ್ಶಿ ಎ.ಟಿ. ಜಾನ್ಸನ್, ಇಲಾಖಾ‌ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮೊದಲಾದವರು ಇದ್ದರು.