ಸಾರಾಂಶ
ಗದಗ: ನಗರದ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ, ಘಟಸ್ಥಾಪನೆ ಮತ್ತು ಶ್ರೀದೇವಿ ಪುರಾಣ ಪ್ರಾರಂಭೋತ್ಸವ, ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕಾರ್ಯಕ್ರಮಗಳು ಸೆ. 22ರಿಂದ ಅಕ್ಟೋಬರ್ 3ರ ವರೆಗೆ ಜರುಗಲಿವೆ ಎಂದು ಶ್ರೀಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಎಸ್. ಮದರಿಮಠ ಹೇಳಿದರು.ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೆ.22ರಂದು ಮುದೇನೂರ ಶಶಿಧರ ಸ್ವಾಮಿಗಳ ಕೃಪಾಶೀರ್ವಾದಿಂದ ಶಮಿ, ಆರಿ, ಬಿಲ್ವ ವೃಕ್ಷಗಳ ಸಂಗಮದ ಪವಿತ್ರ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟ ಶ್ರೀಅನ್ನಪೂಣೇಶ್ವರಿಯ ಸನ್ನಿಧಿಯಲ್ಲಿ 45ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಪ್ರಾರಂಭೊತ್ಸವ ಜರುಗಲಿದೆ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಪುರಾಣ ಪ್ರವಚನ ಮಾಡುವರು, ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಣ ಮಾಡುವರು ಎಂದರು.ಸೆ.22ರಂದು ಸೋಮವಾರ ಬೆಳಗ್ಗೆ 9ಕ್ಕೆ ಧರ್ಮ ಧ್ವಜಾರೋಹಣವನ್ನು ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು ನೆರವೇರಿಸುವರು. ಸಂಜೆ 6.30ಕ್ಕೆ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವವನ್ನು ಶ್ರೀಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ಶುಭ್ ಜುವೆಲ್ಲರ್ಸ್ ಮಾಲೀಕರಾದ ಪೂಜಾ ಕಿರಣ ಭೂಮಾ ಹಾಗೂ ದತ್ತಾ ಪ್ರಾಪರ್ಟಿಸ್ ವ್ಯವಸ್ಥಾಪಕ ಕಿರಣ ಪ್ರಕಾಶ ಭೂಮಾ ಉದ್ಘಾಟಿಸುವರು ಎಂದು ತಿಳಿಸಿದರು.ಸೆ.23ರ ಸಂಜೆ 6.30ಕ್ಕೆ ಶ್ರೀದೇವಿಗೆ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಸೆ. 24 ಹಾಗೂ ಸೆ. 25ರಂದು ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 26ರಂದು ಸಂಜೆ 6.30ಕ್ಕೆ ಶ್ರೀ ದೇವಿಗೆ ಹಾಗೂ ಮುತೈದೆಯರಿಗೆ ಅರಿಷಿಣ, ಕುಂಕುಮ, ಬಳೆ ಸೇವೆ ಜರುಗಲಿದೆ. ಸೆ. 27ರಂದು ಸಂಜೆ 6.30 ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.28ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಡಾ. ವೀರೇಶ ದ್ಯಾವಣ್ಣರ ಹಾಗೂ ಅಭಿಷೇಕ ಹೊಸಳ್ಳಿಮಠ ಅವರ ತಂಡದಿಂದ ಜರುಗಲಿದೆ. ಸೆ.28 ರಿಂದ 30ರ ವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.ಅಕ್ಟೋಬರ್ 1ರಂದು ಸಂಜೆ 6.30ಕ್ಕೆ ಆಯುಧಪೂಜೆ, ಕುಮಾರಿ ಪೂಜೆ ಹಾಗೂ ಶ್ರೀದೇವಿ ಪುರಾಣ ಮಂಗಲೋತ್ಸವ ಜರುಗಲಿದೆ. ಅ. 2ರಂದು ಬೆಳಗ್ಗೆ 9ಕ್ಕೆ ಗದಗ ಶ್ರೀರೇಣುಕಾಚಾರ್ಯ ಮಂದಿರದಿಂದ ಭವ್ಯ ಮೆರವಣಿಗೆ ಮೂಲಕ ತೇರಿನ ಕಳಸ ಆಗಮನ, ಬೆಳಗ್ಗೆ 10ಕ್ಕೆ ಕಳಸಾರೋಹಣ ಪೂಜ್ಯಶ್ರೀಗಳಿಂದ ಜರುಗುವುದು. ಬೆಳಗ್ಗೆ 11 ಕ್ಕೆ ವಿಜಯದಶಮಿ ಬನ್ನಿಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದರು.ಅ.3ರಂದು ಬೆಳಗ್ಗೆ 7.15ಕ್ಕೆ ಗದಗ ಒಕ್ಕಲಗೇರಿ ಶ್ರೀ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಕುಂಭೋತ್ಸವ ಹೊರಡುವುದು. ಬೆಳಗ್ಗೆ 9.30ಕ್ಕೆ ಶ್ರೀ ಅನ್ನಪೂಣೇಶ್ವರಿದೇವಿಗೆ ಹಾಗೂ ಕರ್ತೃ ಗದ್ದುಗೆಗೆ ಕುಂಭಾಭಿಷೇಕ, ಮಧ್ಯಾಹ್ನ 12ಕ್ಕೆ ಪುಣ್ಯಸ್ವರಣೋತ್ಸವ, ಮಹಾ ಪ್ರಸಾದ ಜರುಗಲಿದೆ. ಸಂಜೆ 5 ಕ್ಕೆ ಶ್ರೀ ಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕನಕಗಿರಿಯ ಸುವರ್ಣಗಿರಿ ಸಂಸ್ಥಾನಮಠದ ನಿರಂಜನಪ್ರಭು ಚನ್ನಮಲ್ಲ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಕಲ ಸದ್ಭಕ್ತ ಮಹಿಳೆಯರಿಂದ ಜರುಗುವುದು. ಸಂಜೆ 7ಕ್ಕೆ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರಿಂದ ಜಾನಪದ ಜೀವನ ದರ್ಶನ ಕಾರ್ಯಕ್ರಮ ಜರುಗಲಿದೆ. ಅ.4 ರಂದು ಸಂಜೆ 6.30ಕ್ಕೆ ಕಡುಬಿನ ಕಾಳಗ ಪುರವಂತರ ಸಮ್ಮುಖದಲ್ಲಿ ವಾಧ್ಯ ವೈಭವದೊಂದಿಗೆ ಜರುಗುವುದು ಎಂದು ತಿಳಿಸಿದರು.
ಈ ವೇಳೆ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಎಸ್.ಗುಡಿಮನಿ, ಗುರುಬಸವಲಿಂಗ ದಾನಪ್ಪ ತಡಸದ, ವಿರುಪಣ್ಣ ಬಳ್ಳೊಳ್ಳಿ, ಸುವರ್ಣಾ ಎಸ್.ಮದರಿಮಠ, ಗೀತಾ ವಿ.ಹೂಗಾರ, ಸುಷ್ಮಾ ಎಸ್. ಖಂಡಪ್ಪಗೌಡ್ರ, ಅಶ್ವಿನಿ ಎಸ್. ನೀಲಗುಂದ, ವೀರೇಶ ಕೂಗು, ಕಸ್ತೂರಿಬಾಯಿ ಭಾಂಡಗೆ, ವಿನೋದ ಭಾಂಡಗೆ, ರಾಜು ಕುರಡಗಿ, ವಿ.ಎಚ್. ದೇಸಾಯಿಗೌಡ್ರ ಇದ್ದರು.