ಸಾರಾಂಶ
ಹಾವೇರಿ: ನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತಿವೃಷ್ಟಿಯಿಂದ 2025ನೇ ಸಾಲಿನ ಮುಂಗಾರಿನ ಅವಧಿಯ ಆಗಸ್ಟ್ ತಿಂಗಳಿನಲ್ಲಿ 16,682 ಹೆಕ್ಟೇರ್ ಕೃಷಿ ಹಾಗೂ 340 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 17,022 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.ನಿರಂತರ ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ, ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಬೆಳೆಹಾನಿಯ ಕುರಿತು ಜಂಟಿ ಸಮೀಕ್ಷೆ ಜರುಗಿಸಲಾಗಿದೆ. ತಾಲೂಕುವಾರು ಬೆಳೆಹಾನಿ ಕ್ಷೇತ್ರದ ವಿವರಗಳನ್ನು ಜಿಲ್ಲೆಯ ಎಲ್ಲ ತಹಸೀಲ್ದಾರರು ವರದಿ ಸಲ್ಲಿಸಿದ್ದಾರೆ.ಬೆಳೆಹಾನಿ ವಿವರ: ಬ್ಯಾಡಗಿ ತಾಲೂಕಿನಲ್ಲಿ 6,106 ಹೆಕ್ಟೇರ್ ಕೃಷಿ ಹಾಗೂ 88.43 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 6,195 ಹೆಕ್ಟೇರ್ ಪ್ರದೇಶ, ಹಾನಗಲ್ಲ- 2196.35 ಹೆಕ್ಟೇರ್ ಕೃಷಿ ಹಾಗೂ 71.76 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 2268.11 ಹೆಕ್ಟೇರ್ ಪ್ರದೇಶ, ಹಾವೇರಿ- 319.45 ಹೆಕ್ಟೇರ್ ಕೃಷಿ ಹಾಗೂ 25.52 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 344.97 ಹೆಕ್ಟೇರ್, ಹಿರೇಕೆರೂರು- 4893.35 ಹೆ. ಕೃಷಿ ಹಾಗೂ 94.07 ಹೆ. ತೋಟಗಾರಿಕೆ ಬೆಳೆ ಸೇರಿ 4987.42 ಹೆ. ಪ್ರದೇಶ, ರಾಣಿಬೆನ್ನೂರು 36.51 ಹೆ. ಕೃಷಿ ಹಾಗೂ 14.23 ಹೆ. ತೋಟಗಾರಿಕೆ ಬೆಳೆ ಸೇರಿ 50.74 ಹೆ. ಪ್ರದೇಶ, ರಟ್ಟಿಹಳ್ಳಿ- 1707.01 ಹೆ. ಕೃಷಿ ಹಾಗೂ 25.40 ಹೆ. ತೋಟಗಾರಿಕೆ ಬೆಳೆ ಸೇರಿ 1732.41 ಹೆ. ಪ್ರದೇಶ, ಶಿಗ್ಗಾಂವಿ- 846.99 ಹೆ. ಪ್ರದೇಶ, ಸವಣೂರು- 576.10 ಹೆ. ಕೃಷಿ ಹಾಗೂ 20.70 ಹೆ. ತೋಟಗಾರಿಕೆ ಬೆಳೆ ಸೇರಿ 596.80 ಹೆ. ಪ್ರದೇಶದಲ್ಲಿ ಬೆಳೆಹಾನಿ ಸಮೀಕ್ಷೆ ವರದಿ ನೀಡಲಾಗಿದೆ. ಜಂಟಿ ಸಮೀಕ್ಷೆಯ ಪರಿಶೀಲನಾ ವರದಿಯಂತೆ ಜಿಲ್ಲೆಯ ಎಲ್ಲ ತಾಲೂಕಿನಿಂದ ಒಟ್ಟು 17,022.59 ಹೆಕ್ಟೇರ್ ಕ್ಷೇತ್ರಗಳಲ್ಲಿ ಬೆಳೆಹಾನಿಯಾದ ರೈತರ ಕರಡುಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಸಂಬಂಧಿಸಿದ ತಹಸೀಲ್ದಾರರ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್, ಕೃಷಿ, ತೋಟಗಾರಿಕಾ ಕಚೇರಿಗಳಲ್ಲಿ ಹಾಗೂ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆ. 24ರೊಳಗಾಗಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಿ, ಯಾದಿಯನ್ನು ಅಂತಿಮಗೊಳಿಸಲಾಗುವುದು. ನಿಗದಿಪಡಿಸಿದ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.