ಚಿತ್ರದುರ್ಗದಲ್ಲಿ ರಾಜ್ಯ ಮೊದಲ ಹಿರಿಯ ನಾಗರಿಕರ ಸಲಹಾ ಕೇಂದ್ರ

| Published : Sep 22 2025, 01:00 AM IST

ಚಿತ್ರದುರ್ಗದಲ್ಲಿ ರಾಜ್ಯ ಮೊದಲ ಹಿರಿಯ ನಾಗರಿಕರ ಸಲಹಾ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಿರಿಯ ನಾಗರಿಕರಿಗೆ ಸರ್ಕಾರದ ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಲು ರಾಜ್ಯದ ಮೊದಲ ಹಿರಿಯ ನಾಗರಿಕರ ಸಲಹಾ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಗರದ ಲೋಕಾಯುಕ್ತ ಕಚೇರಿ ಹಿಂಭಾಗದಲ್ಲಿ ಸಲಹಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಸಲಹಾ ಕೇಂದ್ರ ಕೆಲಸ ನಿರ್ವಹಿಸಬೇಕು ಎಂದರು.

ಇಳಿ ವಯಸ್ಸಿನಲ್ಲಿ ಸ್ನೇಹಿತರೊಂದಿಗೆ ಒಡನಾಟ ಇಟ್ಟುಕೊಳ್ಳುವುದರಿಂದ ಒತ್ತಡ ಹಾಗೂ ಆತಂಕದಿಂದ ದೂರವಾಗಿ ಜೀವನ ನಡೆಸಬಹುದು. ಸ್ನೇಹಿತರೊಂದಿಗೆ ಬೆರೆತು ಕಾಲ ಕಳೆಯುವುದರಿಂದ ಒಳ್ಳೆಯ ಜೀವನ ನಿಮ್ಮದಾಗುತ್ತದೆ. ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿವೆ. ಹಿರಿಯ ನಾಗರಿಕ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡು ಇತ್ಯರ್ಥ ಪಡಿಸಲಾಗುವುದು. ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ದೂರು ಸಲ್ಲಿಸಲು ಕಷ್ಟವಾದರೆ, ಟೋಲ್ ಫ್ರೀ ಸಂಖ್ಯೆ 15100 ಕರೆ ಅಥವಾ ಸಂದೇಶ ಮೂಲಕ ಮನವಿ ಮಾಡಿಕೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯದಿಂದಲೇ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿರುವುದರಿಂದ ತಕ್ಷಣವೇ ಸ್ಪಂದನೆ ಹಾಗೂ ನೆರವು ದೊರಯಲಿದೆ ಎಂದು ನ್ಯಾ.ಎಂ.ವಿಜಯ್ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಉಪವಿಭಾಗಾಧಿಕಾರಿ, ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆಯ ಹೊಣೆ ಹೊತ್ತಿರುತ್ತಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೀವರಕ್ಷಣೆ ಮಾಡುವಲ್ಲಿ ಉಪವಿಭಾಗಾಧಿಕಾರಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನ್ಯಾಯಾಧೀಶ ಎಂ.ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್. ಮಹೇಶ್ವರಪ್ಪ ಮಾತನಾಡಿ, ಹಿರಿಯ ನಾಗರಿಕರು ಉತ್ತಮ ಜೀವನ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಬದುಕಿನ ಜಂಜಾಟಗಳನ್ನು ತೊರೆದು 60 ವರ್ಷದ ನಂತರದ ನಿವೃತ್ತಿ ಜೀವನವನ್ನು ಸುಖದಿಂದ ಕಳೆಯಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಹಾಗೂ ಪಾಲಕರ ಪೋಷಣೆ ಸಂರಕ್ಷಣೆ ಹಿರಿಯ ನಾಗರಿಕರ ರಕ್ಷಣಾ ಮಂಡಳಿ ಅಧ್ಯಕ್ಷ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, 60 ವರ್ಷದ ನಂತರ ಮನುಷ್ಯ ಆಲೋಚನೆ ಹಾಗೂ ಜೀವನ ಪದ್ದತಿಗಳು ಬದಲಾಗುತ್ತವೆ. ಸಂಪತ್ತಿನ ಬದಲಿಗೆ ನಾವೆಲ್ಲರೂ ಉತ್ತಮ ಆರೋಗ್ಯವನ್ನು ಬೇಡಿಕೊಳ್ಳಬೇಕು ಎಂದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ್ ಕುಮಾರ್, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ದಿಲ್‍ಶಾದ್ ಉನ್ನೀಸಾ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ಅಧ್ಯಕ್ಷ ಪ್ರೇಮನಾಥ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ನಿಕಟಪೂರ್ವ ಅಧ್ಯಕ್ಷ ರಂಗಪ್ಪ ರೆಡ್ಡಿ ಇದ್ದರು.