ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸೋಮವಾರದಿಂದ (ಸೆ.22) ಆರಂಭವಾಗಲಿರುವ ನಾಡಹಬ್ಬ ದಸರಾ ವೈಭವ ಮನೆ- ಮನಗಳಲ್ಲಿ ಸಂಭ್ರಮ ಮೂಡಿಸಿದೆ. ದುರ್ಗಾರಾಧನೆ, ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ರಂಗುರಂಗಿನ ನಾಡು-ನುಡಿಯ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ 9 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ವಿಜೃಂಭಿಸಲಿವೆ.ಜಿಲ್ಲೆಯ ಸುರಪುರದ ರಂಗಂಪೇಟೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕನ್ನಡ ಸಾಹಿತ್ಯ ಸಂಘದಲ್ಲಿ 83ನೇ ನಾಡಹಬ್ಬಕ್ಕೆ ಸೆ.23 ರಂದು ಚಾಲನೆ ಸಿಗಲಿದ್ದರೆ, ಸುರಪುರದ ಕನ್ನಡ ಸಾಹಿತ್ಯ ಸಂಘ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ನಾಡಹಬ್ಬ ಉತ್ಸವ ಸಮಿತಿ ಜಂಟಿಯಾಗಿ ಸೆ.22ರಿಂದ 39ನೇ ನಾಡಹಬ್ಬದ ಮೆರುಗು ಮೂಡಿಸಲಿದೆ.
ಸಾಹಿತ್ಯಿಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ನಾಡು-ನುಡಿಯ ಇತಿಹಾಸದ ಗತವೈಭವ ಮೆಲುಕು ಹಾಕಿಸುವ ಉಪನ್ಯಾಸಗಳು ಮುಂತಾದ ಕಾರ್ಯಕ್ರಮಗಳು ಕಣ್ಮನ ಸೆಳೆಯಲಿವೆ. ಸೋಮವಾರ ಸಂಜೆವರೆಗೆ ದುರ್ಗಾ ಪ್ರತಿಷ್ಠಾಪನೆ ಜಿಲ್ಲೆಯ ವಿವಿಧೆಡೆ ನೆರೆವೇರಲಿದೆ. ಇದಕ್ಕೆಂದೇ ಹಳ್ಳಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಕೊನೆಯ ಕ್ಷಣದ ಸಿದ್ಧತೆಗಳು ಭಾನುವಾರ ತಡರಾತ್ರಿವರೆಗೂ ಚುರುಕುಗೊಂಡಿದ್ದವು.ಯಾದಗಿರಿ ನಗರದಲ್ಲಿರುವ 900 ಅಡಿಗಳಷ್ಟು ಎತ್ತರದ, 6ನೇ ಚಾಲುಕ್ಯನ ಕಾಲದ್ದು ಎನ್ನಲಾದ, ಐತಿಹಾಸಿಕ ಬೆಟ್ಟದಲ್ಲಿರುವ ಶ್ರೀಭುವನೇಶ್ವರಿ ದೇವಿ ದೇಗುಲದಲ್ಲಿ 44ನೇ ನವರಾತ್ರಿ ವಿಜಯದಶಮಿ ಉತ್ಸವ ಸೋಮವಾರದಿಂದ ಚಾಲನೆಗೊಳ್ಳಲಿದೆ. ಘಟಸ್ಥಾಪನೆ ಮುಂತಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ 9 ದಿನಗಳ ಕಾಲ ಭಕ್ತಿಭಾವದಲ್ಲಿ ಮಿಂದೇಳಲಿವೆ. ದೇವಸ್ಥಾನದ ಧರ್ಮದರ್ಶಿಯಾಗಿದ್ದ ದಿ.ಮಲ್ಲಣ ಕಟ್ಟಿಮನಿಯವರ ತರುವಾಯ, ಪುತ್ರ ಶಿವರಾಂ ಕಟ್ಟಿಮನಿ ಮತ್ತವರ ತಂಡ ಈ ವೈಭವವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ದೇವಿಸ್ತುತಿ, ಪಾರಾಯಣ, ಭಕ್ತಿಗೀತೆ, ಆರಾಧನೆ, ಗಣಪತಿ ಹೋಮ, ಮಹಾರುದ್ರಾಭೀಷೇಕ, ಶತಚಂಡಿ ಯಜ್ಞ ಯಾಗಾರಗಳಂತಕ, ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ, ಪರಂಪರೆಯ ವೈಭವ ಪಸರಿಸುವ ಸಾಹಿತ್ಯಿಕ ಚಟುವಟಿಕೆಗಳು, ತತ್ವಪದ - ಜಾನಪದ-ವಚನ ಗಾಯನ ಕಾರ್ಯಕ್ರಮಗಳು, ಮಕ್ಕಳಿಗೆ ವಿಭಿನ್ನ ಚಟುವಟಿಕೆಗಳ ಜತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಸಂಗೀತ ನೃತ್ಯದ ಆಯೋಜನೆ ಮನೆ-ಮನಗಳಲ್ಲೂ ಸದ್ದು ಮಾಡಲಿದೆ.
ಇನ್ನು, ಮೈಸೂರು ದಸರಾ ವೈಭವವನ್ನು ಕಣ್ಮುಂದೆ ತರುವಂತೆ ಮಾಡುವ ಮೂಲಕ ಹೆಸರಾದ ಯಾದಗಿರಿಯ ಸ್ಟೇಷನ್ ಬಜಾರಿನ ಹಿ೦ದೂ ಸೇವಾ ಸಮಿತಿಯಿಂದ ಅಂಬಾಭವಾನಿ ದೇವಿ ದೇವಸ್ಥಾನದಲ್ಲಿ 49ನೇ ವರ್ಷದ ದಸರಾ ಉತ್ಸವ ಸಿದ್ಧತೆಗಳು ಭರದಿಂದ ಸಾಗಿವೆ. ದಾಂಡಿಯಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಿ.ಮೀ.ಗಟ್ಟಲೇ ವರ್ಣರಂಜಿತ ಬೆಳಕಿನ ಚಿತ್ತಾರಗಳು, ಕಣ್ಮಿಣುಕಿಸುವ ಅಲಂಕಾರಿಕ ದೀಪಗಳು ಸೆಳೆಯುತ್ತಿವೆ.ಡಾ. ಅಂಬೇಡ್ಕರ್ ವೃತ್ತದ ಬಳಿ ನವರಾತ್ರೋತ್ಸವ ಸಂಭ್ರಮ ಮನೆ ಮಾಡಿದೆ. ರಸ್ತೆಯುದ್ದಕ್ಕೂ ಬೆಳಕಿನ ಚಿತ್ತಾರ ಜನಮನ ಸೆಳೆಯುತ್ತಿದೆ. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ಸಮೀಪದ ಅಂಬಾ ಭವಾನಿ ದೇವಸ್ಥಾನ ಸೇರಿದಂತೆ ಅನೇಕ ಕಡೆ 9 ದಿನ ಸಂಭ್ರಮದ ಉತ್ಸವ ಮನೆ ಮಾಡಲಿದೆ. ದಾಂಡಿಯಾ ನೃತ್ಯಕ್ಕೆ ವೇದಿಕೆಗಳು, ಸುರಕ್ಷತಾ ದೃಷ್ಟಿಯಿಂದ ಸಿಸಿಟಿವಿ ಅಳವಡಿಲಾಗುತ್ತಿದೆ.