ಗದಗ: ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಬೆಲೆಯಿದೆ. ಈ ದಿಸೆಯಲ್ಲಿ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಹರ್ಲಾಪೂರದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಲಹೆ ನೀಡಿದರು.

ಗದಗ ತಾಲೂಕಿನ ಹರ್ಲಾಪೂರದ ಕೊಟ್ಟೂರೇಶ್ವರ ಮಠದಲ್ಲಿ ಜರುಗಿದ 318ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಮಹತ್ವವಿದೆ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಪದವಿ ಪಡೆಯದೇ ಕೌಶಲ್ಯದೊಂದಿಗೆ ಶಿಕ್ಷಣ ಕಲಿಯಬೇಕು. ಅಂತಹ ಕೌಶಲ್ಯ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಲು ಮಠ, ಮಂದಿರಗಳಲ್ಲಿ ನಡೆಯುವ ಶಿವ ಶರಣರ ಪುರಾಣ, ಪುಣ್ಯ ಕಥೆಗಳಲ್ಲಿನ ತತ್ವ ಹಾಗೂ ಹಿತೋಪದೇಶಗಳು ದಾರಿದೀಪಗಳಾಗಲಿವೆ. ವಿದ್ಯಾರ್ಥಿಗಳು ಇಂತಹ ಧಾರ್ಮಿಕ ಮತ್ತು ವೈಚಾರಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಶ್ರೀಗಳು ಕರೆ ನೀಡಿದರು.

ಶ್ರೀ ಮಠದಲ್ಲಿ ಕಳೆದ 25 ವರ್ಷಗಳಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಸೇರಿದಂತೆ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಮಠದ ಈ ಸತ್ಕಾರ್ಯ ಇತರ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗುತ್ತ ಬಂದಿದ್ದು, ವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಇದು ಸಹಕಾರಿಯಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಹೇಮರೆಡ್ಡಿ ಮಲ್ಲಮ್ಮ, ಬಸವೇಶ್ವರ ಹಾಗೂ ವಿಶ್ವ ತಾಯಂದಿರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶ್ರೀಗಳು, ಈ ಮಹಾತ್ಮರ ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಯಾಳವಾಡ, ನಿಕೀಲ್ ಕೋರಿ, ಭಾಗ್ಯಲಕ್ಷ್ಮೀ ಶಾನಭೋಗರ, ಜ್ಯೋತಿ ಮನ್ನಾಪೂರ, ಶಿವಶಾಂತ ಶಶಿಮಠ ಹಾಗೂ ಪೂರ್ಣಿಮಾ ಕಾಶಪ್ಪನವರ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಬಿ. ವೀರಾಪೂರ ಹಾಗೂ ನಾಗೇಂದ್ರ ಅರ್ಕಸಾಲಿ ಭಕ್ತಿ ಸಂಗೀತ ಜರುಗಿತು.


ಈ ಸಂದರ್ಭದಲ್ಲಿ ಉಪನ್ಯಾಸಕ ವಿ.ಎಚ್. ಕೊಳ್ಳಿ, ಶರಣಪ್ಪಗೌಡ ಪಾಟೀಲ, ಸಿದ್ದು ಯಾಳವಾಡ, ಕೊಟ್ರಯ್ಯ ಮಜ್ಜಿಗುಡ್ಡ, ಕೊಟ್ರಗೌಡ ಕಾತರಕಿ, ಶರಣಪ್ಪ ದೇಸಾಯಿ, ದೇವೇಂದ್ರಪ್ಪ ಜಮಲಿಂಗಪ್ಪನವರ, ಕೆ.ಬಿ. ಕೊಣ್ಣೂರು, ಟಿ.ಡಿ. ಗವಾನಿ, ಪ್ರಕಾಶ ಹೊಸಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ರಾಮಣ್ಣ ಬೆಳದಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಜುಂಜಣ್ಣಿ ನಿರೂಪಿಸಿದರು.