ರಾಮನಗರ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸ್ನೇಹಿ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಅನ್ಮೋಲ್ ಜೈನ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳೆಯರ ಆರೋಗ್ಯದ ಹಿತದೃಷ್ಠಿಯಿಂದ ಮಹಿಳಾ ಸ್ನೇಹಿ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಎನ್.ಆರ್.ಎಲ್.ಎಂ.-ಸಂಜೀವಿನಿ ಯೋಜನೆಯಡಿ ರೂಪುಗೊಂಡಿರುವ ಸ್ವಸಹಾಯ ಗುಂಪುಗಳ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಕೊಠಡಿ ಕಲ್ಪಿಸಲಾಗುವುದು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಚಿಕ್ಕ ಸುಬ್ಬಯ್ಯ ಮಾತನಾಡಿ, ಜೀವನದಲ್ಲಿ ತಾಯಿ, ಅಕ್ಕ, ತಂಗಿ, ಹೆಂಡತಿಯ ಪಾತ್ರ ಬಹಳ ಮುಖ್ಯವಾಗಿದೆ. ಮನೆಯಲ್ಲಿ ಮಹಿಳೆಯರು ನೆಮ್ಮದಿಯಾಗಿದ್ದರೆ ಆ ಮನೆ ನೆಮ್ಮದಿಯಾಗಿರುತ್ತದೆ. ಹೆಣ್ಣು ಕುಟುಂಬ ಹಾಗೂ ದೇಶದ ಅಭಿವೃದ್ಧಿಗೆ ತಳಪಾಯವಾಗಿದ್ದಾರೆ ಎಂದು ಹೇಳಿದರು.ಮಹಿಳೆಯರು ಬುದ್ದಿವಂತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡುತ್ತಾರೆ. 1835ರಲ್ಲಿ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೂ ಶಿಕ್ಷಣ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳಲು ಶಿಕ್ಷಣ ಪ್ರಮುಖವಾಗಿದೆ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಚನ್ನಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕುಸುಮಲತಾ ಮಾತನಾಡಿ, ಜಿಲ್ಲೆ, ರಾಜ್ಯ, ದೇಶದಲ್ಲಿ ಮಹಿಳೆಯರು ಹಲವಾರು ಸಾಧನೆಗಳನ್ನು ಮಾಡುತ್ತಿದ್ದಾರೆ. ಕುಟುಂಬವನ್ನು ಸಮರ್ಥವಾಗಿ ನಿರ್ವಹಣೆ ಮಾಡುವಂತಹ ಶಕ್ತಿ, ಸಾಮರ್ಥ್ಯವಿರುವುದು ಮಹಿಳೆಯರಿಗೆ ಮಾತ್ರ, ಒಂದು ಕುಟುಂಬ ಚನ್ನಾಗಿದ್ದರೆ ಒಂದು ರಾಷ್ಟ್ರವೂ ಸಹ ಅಭ್ಯುದಯವಾಗಲು ಸಾಧ್ಯ. ಪ್ರತಿದಿನ ಮಹಿಳೆಯರು ತಮ್ಮ ಹಕ್ಕುಗಳು, ಸಮಾನ ಗೌರವ, ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಅವರಿಗೆ ಕುಟುಂಬದಿಂದ ಹಿಡಿದು ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ಯಾವ ರೀತಿ ಸ್ಥಾನಮಾನಗಳನ್ನು ಪುರುಷರು ನೀಡುತ್ತಿದ್ದಾರೆ ಎಂಬ ವಿಷಯದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಎನ್.ಆರ್.ಎಲ್.ಎಂ.-ಸಂಜೀವಿನಿ ಯೋಜನೆಯಡಿ ರೂಪುಗೊಂಡಿರುವ ಸ್ವಸಹಾಯ ಗುಂಪುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಶಿವಕುಮಾರ್, ಉಪಕಾರ್ಯದರ್ಶಿ ಧನರಾಜ್, ಮುಖ್ಯ ಲೆಕ್ಕಾಧಿಕಾರಿ ನಂದೀಶ್, ರಾಮನಗರ ತಾಪಂ ಇಒ ಪೂರ್ಣಿಮಾ, ಹಾರೋಹಳ್ಳಿ ತಾಪಂ ಇಒ ಅಪೂರ್ವ, ಜಂಟಿ ಕೃಷಿ ನಿರ್ದೇಶಕರಾದ ಅಂಬಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಲಕ್ಷ್ಮಿದೇವಿ ಮತ್ತಿತರರು ಉಪಸ್ಥಿತರಿದ್ದರು.13ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.