ಹೆಣ್ಣು ಯಾವಗಲೂ ಹುಟ್ಟು ಹೋರಾಟಗಾರ್ತಿ, ಛಲಗಾತಿ, ಧೈರ್ಯವಂತೆ ಹೇಗೋ ಹಾಗೆ ಅವಳು ಯಾವುದೇ ಕ್ಷೇತ್ರದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಬಗ್ಗೆ ಸಾಕಷ್ಟು ನಿದರ್ಶನಗಳನ್ನು ತೋರಿಸಿಕೊಟ್ಟಿದ್ದಾಳೆಂದು ಬೆಂಗಳೂರಿನ ಪತ್ರಕರ್ತೆ ರೇಣುಕಾಂಬೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಹೆಣ್ಣು ಯಾವಗಲೂ ಹುಟ್ಟು ಹೋರಾಟಗಾರ್ತಿ, ಛಲಗಾತಿ, ಧೈರ್ಯವಂತೆ ಹೇಗೋ ಹಾಗೆ ಅವಳು ಯಾವುದೇ ಕ್ಷೇತ್ರದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಬಗ್ಗೆ ಸಾಕಷ್ಟು ನಿದರ್ಶನಗಳನ್ನು ತೋರಿಸಿಕೊಟ್ಟಿದ್ದಾಳೆಂದು ಬೆಂಗಳೂರಿನ ಪತ್ರಕರ್ತೆ ರೇಣುಕಾಂಬೆ ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಶಾಲೆಯಲ್ಲಿ ಓದುವಾಗಲೆ ಭೇದ ಭಾವವಿಲ್ಲದೆ ಅವಳ ಕೌಶಲ್ಯಕ್ಕೆ ತಕ್ಕಂತೆ ಬೆಳೆಯಲು ಪ್ರೋತ್ಸಾಹಿಸಿದರೆ ಹೆಣ್ಣು ಮತ್ತಷ್ಟು ಮುಂದೆ ಬಂದು ಕುಟುಂಬದ ಹಾಗೂ ದೇಶದ ಶಕ್ತಿಯಾಗಿ ಸಾಧನೆ ಮಾಡಲು ಸಾಧ್ಯ. ಹೆಣ್ಣು ಮಕ್ಕಳ ಉಡುಪಗಳ ಬಗ್ಗೆ ಅವಳ ದೇಹದ ಬಗ್ಗೆ ಸಂಕುಚಿತ ಭಾವನೆ ಬರದಂತೆ ಅವರಲ್ಲಿ ಆತ್ಮವಿಶ್ವಾಸ ತುಂಬುವಂತಹ ವಿಶಾಲತೆ ಬೆಳಸಿಕೊಳ್ಳಬೇಕು. ಹೆಣ್ಣು ತಮ್ಮ ಜೀವನದಲ್ಲಿ ಬರುವ ಸವಾಲುಗಳಿಗೆ ಅಂಜಿ ಮೂಲೆಗುಂಪಾಗಬಾರದು, ಸವಾಲುಗಳನ್ನು ಎದುರಿಸುವ ಶಕ್ತಿ, ಬುದ್ಧಿವಂತಿಯನ್ನು ಬೆಳೆಸಿಕೊಳ್ಳಬೇಕು. ಆಗ ಕೌಟುಂಬಿಕವಾಗಿರಬಹುದು, ಸಾಮಾಜಿಕವಾಗಿರಬಹುದು ಏನೇ ಅಡ್ಡ ಬಂದರೂ ಎದುರಿಸಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು . ಪ್ರಾಂಶುಪಾಲರಾದ ಡಾ. ಸತೀಶ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ತಾರತಮ್ಯ ನೋವು ತರುವ ಯಾವುದೇ ಘಟನೆಗಳು ನಡೆಯದಂತೆ ಅವರ ಕಾಳಜಿಯನ್ನು ತುಂಬಾ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಮಹಿಳಾ ಹಿತರಕ್ಷಣಾಸಮಿತಿಯ ಬಗ್ಗೆ ಹೆಚ್ಚು ಅಭಿಮಾನ ಇದೆ ಎಂದರು. ಸಮಾಜ ಸೇವಕಿ ಶೋಭಾ ಮಾತನಾಡಿ, ಹೆಣ್ಣು ನನಗೆ ಮೀಸಲಾತಿ ನೀಡಿ ಎಂದು ಯಾವತ್ತು ಕೇಳಿಕೊಳ್ಳಬಾರದು. ಅವರ ಸ್ವಪ್ರತಿಭೆಯಿಂದ ಮುಂದೆ ಬರೆಬೇಕು. ಇತಿಹಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ನಮಗೆಲ್ಲಾ ಮಾದರಿಯಾಗಿದ್ದು, ನಾವು ಕಿರಿಯರಿಗೆ ಮಾದರಿಯಾಗಿ ನಡೆದುಕೊಳ್ಳೋಣ ಎಂದು ತಿಳಿಸಿದರು. ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ ಎಸ್ ಶಿವಪ್ರಸಾದರವರು ಮಾತನಾಡಿ, ಹೆಣ್ಣು ತನ್ನ ಜವಾಬ್ದಾರಿಗಳನ್ನು ಅತ್ಯಂತ ದಿಟ್ಟವಾಗಿ ನಿರ್ವಹಿಸುತ್ತಾಳೆ. ಎಂತಹದೆ ಕಠಿಣ ಪರಿಸ್ಥಿತಿಗಳು ಬಂದರೂ ತಾನು ಹಿಡಿದ ಕೆಲಸವನ್ನು ಬಿಡದೆ ಮುಗಿಸುವ ಛಾತಿ ಅವಳದ್ದು. ಕುಟುಂಬದ ಸರ್ವತೋಮುಖ ಬೆಳೆವಣಿಗೆಗೆ ಅವಳ ಕೊಡುಗೆ ಅಪಾರ. ಹೆಣ್ಣು ವಿದ್ಯಾವಂತೆಯಾದರೆ ಅದು ಅವಳೊಂದು ಮನೆಗೆ ಸೀಮಿತವಾಗದೆ, ಸಮಾಜದ ಉನ್ನತಿಗೂ ಕಾರಣವಾಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಸಿಬ್ಬಂದಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಮಹಿಳಾ ಸಿಬ್ಬಂದಿಗಳೇ ಮಾಡಿದ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಡಾ. ಚಂದ್ರಕಲಾ, ಡಾ. ದೀಪ್ತಿ ಅಮಿತ್, ಡಾ. ನಿರ್ಮಾಲಾದೇವಿ, ಸ್ವರ್ಣಗೌರಿ ಎಂ ಎನ್, ಸುಮನ್, ಸುಮಾ, ಡಾ. ಹನುಮಂತಪ್ಪ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಸಿಬ್ಬದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.