ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆ, ಸದ್ಬಳಕೆ ಹಾಗೂ ಅಭಿವೃದ್ಧಿಗೆ ಪೂರಕವಾಗುವ ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ.

ಧಾರವಾಡ:

ನೀರಿನ ಉಳಿತಾಯ, ಸದ್ಬಳಕೆ ಹಾಗೂ ನೀರಿನ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನೀರು ಮಾಲಿನ್ಯ ನಿಯಂತ್ರಣ ಕಾಯ್ದೆ ಪಾಲಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಹೇಳಿದರು.

ಇಲ್ಲಿಯ ವಾಲ್ಮಿ ಸಂಸ್ಥೆಯಲ್ಲಿ ಬುಧವಾರ ನಡೆದ ವಿಶ್ವ ಭೂ ದಿನಾಚರಣೆ ಉದ್ಘಾಟಿಸಿದ ಅವರು, ವಾಲ್ಮಿ ಸಂಸ್ಥೆಯು ಮಣ್ಣು ಮತ್ತು ನೀರಿನ ಸದ್ಬಳಕೆ ಹಾಗೂ ರೈತರಿಗೆ ಅನುಕೂಲಕರ ಹೊಸ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ಅವುಗಳಿಗೆ ಅನುದಾನ ಬಿಡುಗಡೆ ಮಾಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ದೇಶದ ಕೃಷಿಭೂಮಿಯಲ್ಲಿ ಸಮರ್ಪಕವಾಗಿ ಸಾಗುವಳಿ ಮಾಡಿದರೆ, ಭಾರತವು ಇಡೀ ಜಗತ್ತಿನ ಆಹಾರ ಭಂಡಾರವಾಗುವ ಸಾಮರ್ಥ್ಯ ಹೊಂದಿದೆ. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆ, ಸದ್ಬಳಕೆ ಹಾಗೂ ಅಭಿವೃದ್ಧಿಗೆ ಪೂರಕವಾಗುವ ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ. ಲಾಭದಾಯಕ ಕೃಷಿ ನಡೆಸುವ ಜತೆಗೆ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಾಲ್ಮಿ ಸಂಸ್ಥೆಯು ರೈತರಿಗೆ ನಿರಂತರವಾಗಿ ತರಬೇತಿ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದರು.

ಕೃಷಿ ಹಾಗೂ ಪಶು ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕೃಷಿ ಕೈಗೊಳ್ಳಲು ಅಗತ್ಯ ಸಲಹೆ-ಸೂಚನೆ ನೀಡುವ ಉದ್ದೇಶದಿಂದ ‘ಧಾರವಾಡ ಜಿಲ್ಲಾಡಳಿತ ಜನರ ಮನೆಗೆ’ ಎಂಬ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಮಣ್ಣು ವಿಜ್ಞಾನಿ ಡಾ. ವಿ.ಬಿ. ಕುಲಿಗೋಡ, ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಮಣ್ಣು ಅವನತಿಯತ್ತ ಸಾಗಿದೆ. ಕೃಷಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳು ಸಮತೋಲನವಾಗಿರಬೇಕು. ಕೃಷಿಗೆ ಅಂತರ್ಜಲದ ಹೆಚ್ಚು ಬಳಕೆಯಾಗುತ್ತದೆ. ಬೋರ್‌ವೆಲ್ ನೀರಿನಲ್ಲಿ ಲವಣದ ಪ್ರಮಾಣದ ಹೆಚ್ಚಾಗಿದ್ದು, ನೀರು ಮತ್ತು ಮಣ್ಣಿನ ಅವೈಜ್ಞಾನಿಕ ನಿರ್ವಹಣೆಯಿಂದ ಸವಳು-ಜವಳು ಸಮಸ್ಯೆ ರೈತರು ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ 80 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಅಚ್ಚುಕಟ್ಟು ಪ್ರದೇಶ ಸವಳು ಜವಳಾಗಿದೆ ಎಂದು ಮಾಹಿತಿ ನೀಡಿದರು.

ವಾಲ್ಮಿ ನಿರ್ದೇಶಕ ಡಾ. ಗಿರೀಶ ಎನ್. ಮರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಗತಿಪರ ರೈತ ಗುರುಸಿದ್ದಪ್ಪ ಹುಬ್ಬಳ್ಳಿ, ಬಸವರಾಜ ಮಾಟೊಳ್ಳಿ ಅವರನ್ನು ಸನ್ಮಾನಿಸಲಾಯಿತು.