ಕಾಮಗಾರಿ ನಡೆಯುವ ಜಾಗದಲ್ಲೇ ಕಾರ್ಮಿಕರು ಬಂದು ಫೇಸ್‌ ಐಡಿ ಹಾಜರಿ ನೀಡಿ ಕೆಲಸಕ್ಕೆ ಹಾಜರಾಗುತ್ತಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಮಾನಕ್ಕೆ ಹೆದರಿ ಕಾರ್ಮಿಕರು ನಿರೀಕ್ಷೆಗೆ ತಕ್ಕಷ್ಟು ಕೆಲಸಕ್ಕೆ ಬರುತ್ತಿಲ್ಲ. ಸದ್ಯ ತಾಲೂಕಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದರೂ ನರೇಗಾ ಕೂಲಿ ಕಾರ್ಮಿಕರು ಭೀತಿಗೊಂಡು ಮನೆಯಲ್ಲಿ ಕುಳಿತುಕೊಳ್ಳದೇ ಬೆಳಗಿನ ಜಾವದಲ್ಲೇ ಕೆಲಸಕ್ಕೆ ಕಾರ್ಮಿಕರು ಹಾಜರಾಗುತ್ತಿದ್ದಾರೆ.

ಹೌದು, ತಾಲೂಕಿನ 26 ಗ್ರಾಪಂಗಳಲ್ಲಿ ಇಟ್ಟಿಗಿ, ಮೈಲಾರ, ನಂದಿಹಳ್ಳಿ ಗ್ರಾಪಂ ಹೊರತು ಪಡಿಸಿ ಉಳಿದೆಲ್ಲ ಕಡೆ ನಿತ್ಯ ನರೇಗಾ ಕಾಮಗಾರಿ ನಡೆಯುತ್ತಿದೆ. ಬೆಳಗಿನಜಾವ 6 ಗಂಟೆಗೆ ಕಾಮಗಾರಿ ನಡೆಯುವ ಜಾಗದಲ್ಲೇ ಕಾರ್ಮಿಕರು ಬಂದು ಫೇಸ್‌ ಐಡಿ ಹಾಜರಿ ನೀಡಿ ಕೆಲಸಕ್ಕೆ ಹಾಜರಾಗುತ್ತಾರೆ. 10ರಿಂದ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮತ್ತೆ ಫೇಸ್‌ ಐಡಿ ಹಾಜರಿ ನೀಡುತ್ತಾರೆ.

2025ನೇ ಸಾಲಿನಲ್ಲಿ 404 ವಿವಿಧ ಕಾಮಗಾರಿಗಳು ಪೂರ್ಣಗೊಳ್ಳದೇ ಅರೆಬರೆಯಾಗಿದ್ದವು. ಕೆರೆ, ಕಾಲುವೆಗಳ ಹೂಳೆತ್ತುವ ಕಾಮಗಾರಿ, ನಾಲಾ ಪುನಶ್ಚೇತನ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2.49 ಲಕ್ಷ ಮಾನವ ದಿನಗಳ ಸೃಜನೆಯಾಗಬೇಕಿದೆ. ಇದರಲ್ಲಿ ಈವರೆಗೂ 65,200 ಕಾರ್ಮಿಕರು ಮಾತ್ರ ಕೆಲಸಕ್ಕೆ ಬರುತ್ತಿದ್ದಾರೆ. ಜತೆಗೆ 23 ಗ್ರಾಪಂಗಳಲ್ಲಿ ಡೈನಾಮಿಕ್‌ ರಿಪೋರ್ಟ್ ಅನ್ವಯ 270 ಕಾಮಗಾರಿಗಳಿವೆ. ಇದಕ್ಕಾಗಿ 5,38,900 ಮಾನವ ದಿನಗಳ ಸೃಜನೆ ಮಾಡಬಹುದು. 7.88 ಲಕ್ಷ ಮಾನವ ದಿನಗಳ ಸೃಜನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಗುರಿಗೆ ತಕ್ಕಂತೆ ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ ಕಾಡುತ್ತಿದೆ.

ತುಂಗಭದ್ರಾ ನದಿ ತೀರದ ಹರವಿ, ಕುರುವತ್ತಿ, ಮೈಲಾರ, ಹೊಳಲು, ಬನ್ನಿಮಟ್ಟಿ, ಬ್ಯಾಲಹುಣ್ಸಿ, ಮಕರಬ್ಬಿ, ಅಂಗೂರು, ಮಾಗಳ, ಅಲ್ಲಿಪುರ, ನವಲಿ, ಹೊನ್ನೂರು, ರಾಜವಾಳ, ಕೊಂಬಳಿ, ಕಂದಗಲ್ಲು, ಸೋವೇನಹಳ್ಳಿ, ಹಕ್ಕಂಡಿ ಸೇರಿ ಇತರೆ ಭಾಗಗಳಲ್ಲಿ ಭತ್ತದ ಕಟಾವು ನಡೆಯುತ್ತಿದೆ. ರೈತರ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ನರೇಗಾ ಕೆಲಸಕ್ಕೆ ಕಾರ್ಮಿಕರು ಹೋಗುತ್ತಿಲ್ಲ ಎಂಬುದು ಒಂದು ಕಾರಣವಾದರೆ, ಉಳಿದ ಕಡೆ ಬಿಸಿಲಿನ ಪ್ರಖರತೆಗೆ ಹೆದರಿ ಕೆಲಸಕ್ಕೆ ಬರುತ್ತಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ.

ತಾಲೂಕಿನ 23 ಗ್ರಾಪಂಗಳ ವ್ಯಾಪ್ತಿಯಲ್ಲಿ 6130 ಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಿ ಫಾರಂ-6 ಪಡೆದಿದ್ದಾರೆ. ಇದರಲ್ಲಿ 4119 ಜನ ಕೆಲಸಕ್ಕೆ ಬಂದಿದ್ದು, 2011 ಕಾರ್ಮಿಕರು ಕೆಲಸಕ್ಕೆ ಗೈರಾಗಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ಸರ್ಕಾರಿ ಕಚೇರಿಗಳಿಗೆ ಬೆಳಿಗ್ಗೆ 8 ಗಂಟೆಯಿಂದ 1.30ರವರೆಗೂ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಿಯಾಯ್ತಿ ನೀಡದಿರುವುದು ಎಷ್ಟು ಸರಿ ಎಂದು ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

ತಾಲೂಕಿನ 23 ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಈವರೆಗೂ 6130 ಜನ ಫಾರಂ-6 ಪಡೆದಿದ್ದಾರೆ. ಆದರೆ 4119 ಜನ ಮಾತ್ರ ಕೆಲಸಕ್ಕೆ ಬಂದಿದ್ದು, ಉಳಿದಂತೆ 2011 ಕಾರ್ಮಿಕರು ವೈಯಕ್ತಿಕ ಕಾರಣದಿಂದ ಬಂದಿಲ್ಲ ಎನ್ನುತ್ತಾರೆ ಹೂವಿನಹಡಗಲಿ ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ.

ಬಿಲಿಸಿನ ತಾಪಕ್ಕೆ ಹೊರಗೆ ಬರಬೇಡಿ ಎಂದು ಅಧಿಕಾರಿಗಳು ಸಲಹೆ ನೀಡುತ್ತಾರೆ. ಆದರೆ ನಾವು ಬಿಸಿಲಿಗೆ ಬಂದು ಕೆಲಸ ಮಾಡದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಿಯಾಯ್ತಿ ನೀಡಬೇಕು ಎನ್ನುತ್ತಾರೆ ಹೂವಿನಹಡಗಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶಬ್ಬೀರ್ ಬಾಷಾ.