ಹೊಸಪೇಟೆ: ವಿಶೇಷ ಮತದಾರರ ಪಟ್ಟಿಯ ಶುದ್ಧೀಕರಣ ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ದೋಷರಹಿತವಾಗಿ ಪೂರ್ಣಗೊಳಿಸಲು ಚುನಾವಣಾ ಶಾಖೆಯು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅರ್ಹ ಯಾವುದೇ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಹಾಗೂ ಪಟ್ಟಿಯಲ್ಲಿ ನಕಲಿ ಅಥವಾ ಅನರ್ಹ ಹೆಸರು ಉಳಿಯಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳ ತಂಡ ಜಂಟಿ ಪರಿಶೀಲನೆ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಎಸ್‌ಡಿಒ, ಎಎಸ್‌ಡಿಒ ಪಟ್ಟಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದ್ದು, ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ. ಬೂತ್ ಮಟ್ಟದ ಏಜೆಂಟರು ಹಾಗೂ ಬಿಎಲ್‌ಒಗಳು ಜಂಟಿಯಾಗಿ ಪರಿಶೀಲಿಸಿ ನೀಡುವ ತಿದ್ದುಪಡಿಗಳನ್ನು ಕಂಪ್ಯೂಟರ್ ಬ್ಯಾಕ್‌ರೋಲ್‌ನಲ್ಲಿ ಸರಿಪಡಿಸಿ ಕರಡು ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ ಎಂದರು.

ಮನೆ ಮನೆ ಭೇಟಿ ವೇಳೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ ಬಿಎಲ್‌ಒಗಳ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ 38392 ಮೃತ ಮತದಾರರು ಹಾಗೂ ಖಾಯಂ ಆಗಿ ಸ್ಥಳಾಂತರಗೊಅಡಿರುವ 69339 ಮತದಾರರರನ್ನು ಗುರುತಿಸಲಾಗಿದೆ. ಅದಷ್ಟೇ ಅಲ್ಲದೇ ಈಗಾಗಲೇ 18804 ದಾಖಲಾಗಿರುವವರು ಹಾಗೂ 424 ಇತರೆ ಮತದಾರರು, ಮ್ಯಾಪಿಂಗ್ ಆಗದ ಸೇರಿ ಸುಮಾರು 2,44,392 ಮಾಹಿತಿದಾರರ ಸಂಗ್ರಹಣೆ ಮಾಡಲಾಗಿದೆ. ಇದರಲ್ಲಿ ಈಗಾಗಲೇ ರೋಲ್ ಬ್ಯಾಕ್ ಮಾಡಿಕೊಂಡು ಪುನಃ ಪರಿಶೀಲನೆ ಮಾಡಿ 1,40,777 ಮತದಾರರ ದಾಖಲೆಗಳ ಸಂಗ್ರಹಿಸಿ ಸರಿಪಡಿಸಲಾಗಿದೆ. ಇನ್ನುಳಿದ 1,03,615 ಮತದಾರರಿಗೆ ದಾಖಲೆಗಳನ್ನು ಸಲ್ಲಿಸಲು ಕರಡು ಮತದಾರರ ಪಟ್ಟಿ ನಂತರ ವಿಚಾರಣೆಗೆ ನೋಟಿಸ್ ನೀಡಲಾಗುತ್ತದೆ ಎಂದರು.

ಮೃತಪಟ್ಟವರು ಹಾಗೂ ಸ್ಥಳಾಂತರಗೊಅಡವರನ್ನು ಪ್ರತ್ಯೇಕಿಸಿದ ನಂತರ, ಬಾಕಿ ಉಳಿದಿರುವ ಮತದಾರರ ಮಾಹಿತಿಯನ್ನು ಮನೆ​ಮನೆಗೆ ಭೇಟಿ ನೀಡಿ ಅಂತಿಮಗೊಳಿಸಲಾಗುವುದು.


ಕಠಿಣ ಕ್ರಮ

ಇತರ ರಾಜ್ಯಗಳಿಂದ ವಲಸೆ ಬಂದು ತಪ್ಪು ಮಾಹಿತಿ ನೀಡಿದರೆ ಅಥವಾ ಇತರ ಸಂಬಂಧಿಕರ ದಾಖಲೆ ದುರ್ಬಳಕೆ ಮಾಡಿಕೊಂಡರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 2002ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಯಾವುದೇ ಹೊಸ ದಾಖಲೆ ಅಗತ್ಯವಿಲ್ಲ. ತಂದೆ, ತಾಯಿ ಅಥವಾ ಕುಟುಂಬದ ಹೆಸರು ಪಟ್ಟಿಯಲ್ಲಿದ್ದರೆ, ಹುಟ್ಟಿದ ದಿನಾಂಕ ಮತ್ತು ಸಂಬಂಧದ ದಾಖಲೆ ನೀಡಿ ಹೊಸದಾಗಿ ಹೆಸರು ಸೇರಿಸಬಹುದು.

ಮ್ಯಾಪಿಂಗ್ ಕೊರತೆ ಅಥವಾ ತಿದ್ದುಪಡಿಗಳಿದ್ದಲ್ಲಿ ಸಂಬಂಧಪಟ್ಟ ಎಇಆರ್‌ಒ ಕಚೇರಿಯಿಂದ ಬರುವ ನೋಟಿಸ್‌ಗೆ ತಕ್ಷಣ ಸ್ಪಂದಿಸಿ, ಸೂಕ್ತ ದಾಖಲೆಗಳನ್ನು ಒದಗಿಸಿ ದೋಷರಹಿತ ಅಂತಿಮ ಪಟ್ಟಿ ತಯಾರಿಗೆ ಸಹಕರಿಸಬೇಕು ಹಾಗೂ ತಮ್ಮ ಮತದಾನದ ಹಕ್ಕನ್ನು ಕಾಯ್ದುಕೊಳ್ಳಬೇಕು ಎಂದು ಡಿಸಿ ಕವಿತಾ ಎಸ್. ಮನ್ನಿಕೇರಿ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಉಪಸ್ಥಿತಿರಿದ್ದರು.