ಕಾರವಾರದಲ್ಲಿ ಆಪರೇಷನ್ ರೈಸ್ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯ ಅರಣ್ಯ ಪ್ರದೇಶ ಮತ್ತು ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯೊಳಗೆ ಮಾದಕ ವಸ್ತುಗಳ ಸರಬರಾಜು ಆಗುವುದನ್ನು ತಡೆಯಬೇಕು ಎಂದು ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕ್ರಿಮ್ಸ್ ಆವರಣದಲ್ಲಿ ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸುವ ಕಾರ್ಯಕ್ರಮ “ಆಪರೇಷನ್ ರೈಸ್” ಉದ್ಘಾಟಿಸಿ ಮಾತನಾಡಿದರು. ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವಲ್ಲಿ ವೈದ್ಯರು ಮತ್ತು ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಸಾರ್ವಜನಿಕರು ಕೆಎಸ್‌ಪಿ ಆ್ಯಆಪ್ ಬಳಸುವ ಮೂಲಕ ಮಾದಕ ವಸ್ತುಗಳ ಕುರಿತಂತೆ ಮಾಹಿತಿ ನೀಡಬಹುದಾಗಿದ್ದು, ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು. ಕ್ರಿಮ್ಸ್ ಕ್ಯಾಂಪಸ್‌ನ್ನು ಡ್ರಗ್ಸ್ ಫ್ರೀ ಕ್ಯಾಂಪಸ್ ಮಾಡಲು ನಿರ್ಧರಿಸಲಾಗಿದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಮಾದಕ ವಸ್ತು ಸೇವನೆ ಪಿಡುಗಿನ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲೆಯಲ್ಲಿ ಕಳೆದ 1.5 ವರ್ಷದಲ್ಲಿ 496 ಪ್ರಕರಣಗಳಲ್ಲಿ 589 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, 75 ವಲ್ನರೇಬಲ್ ಸ್ಥಳಗಳನ್ನು ಗುರುತಿಸಲಾಗಿದೆ. ಆ ಪ್ರದೇಶದಲ್ಲಿ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. 129 ಕಾಲೇಜುಗಳನ್ನು ಆ್ಯಂಟಿ ಡ್ರಗ್ ಕಮಿಟಿಗಳನ್ನು ರಚಿಸಲಾಗಿದ್ದು, 1879 ಜಾಗೃತಿ ಕಾರ್ಯಕ್ರಮಗಳ ಮೂಲಕ 67000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ ಎಂದರು.
ಕ್ರಿಮ್ಸ್‌ನ ಡೀನ್ ಡಾ. ಪೂರ್ಣಿಮಾ, ಕಾರವಾರ ಡಿಎಫ್‌ಒ ಆಂಥೋಣಿ ಮರಿಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಜಯ್ ದೊಡ್ಡಮನಿ ಹಾಗೂ ಕ್ರಿಮ್ಸ್‌ನ ವಿದ್ಯಾರ್ಥಿಗಳು ಇದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಸ್ವಾಗತಿಸಿದರು. ಡಿವೈಎಸ್‌ಪಿ ಗಿರೀಶ್ ವಂದಿಸಿದರು. ಮಾದಕ ವಸ್ತುಗಳ ಬಳಕೆ ವಿರುದ್ದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.