ಯೋಗದಿಂದ ಸದೃಢ ದೇಹ, ರೋಗನಿರೋಧಕ ಶಕ್ತಿ ವೃದ್ಧಿ: ಯೋಗೇಶ್‌

| Published : Jun 16 2024, 01:46 AM IST

ಸಾರಾಂಶ

ರಾಷ್ಟ್ರದ ಎಲ್ಲ ಜನರಿಗೆ ಆರೋಗ್ಯ ಭಾಗ್ಯ ಒದಗಿಸುವುದರ ಜತೆ ರೋಗ ಬಾರದಂತೆ ದೇಹವನ್ನು ಸದೃಢಗೊಳಿಸುವ ಮತ್ತು ದೇಹದ ನಿರೋಧಕ ಶಕ್ತಿಯನ್ನು ವೃದ್ಧಿಸುವ ಕುರಿತಂತೆ ಅರಿವು ಮೂಡಿಸುವ ಉದ್ದೇಶವನ್ನು ಆಯುಷ್ ಇಲಾಖೆ ಹೊಂದಿದೆ.

ಯಲ್ಲಾಪುರ: ದೇಶದ ಪ್ರತಿಯೊಬ್ಬರಿಗೂ ಆರೋಗ್ಯವನ್ನೊದಗಿಸುವುದೇ ಆಯುಷ್ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಉಮ್ಮಚಗಿಯ ಆಯುಷ್ ವೈದ್ಯಾಧಿಕಾರಿ ಯೋಗೇಶ್ ಮಡಗಾಂವ್ಕರ ತಿಳಿಸಿದರು.

ಪಟ್ಟಣದ ಹೋಲಿ ರೋಜರಿ ಪ್ರೌಢಶಾಲಾ ಸಭಾಭವನದಲ್ಲಿ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲೆಯ ಆರೋಗ್ಯ ಕೇಂದ್ರ ಹಾಗೂ ಹೋಲಿ ರೋಜರಿ ಪ್ರೌಢಶಾಲೆಗಳ ಆಶ್ರಯದಲ್ಲಿ ಜೂ. ೧೫ರಂದು ಹಮ್ಮಿಕೊಂಡಿದ್ದ ಆಯುಷ್ ಅರಿವು ಮತ್ತು ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಎಲ್ಲ ಜನರಿಗೆ ಆರೋಗ್ಯ ಭಾಗ್ಯ ಒದಗಿಸುವುದರ ಜತೆ ರೋಗ ಬಾರದಂತೆ ದೇಹವನ್ನು ಸದೃಢಗೊಳಿಸುವ ಮತ್ತು ದೇಹದ ನಿರೋಧಕ ಶಕ್ತಿಯನ್ನು ವೃದ್ಧಿಸುವ ಕುರಿತಂತೆ ಅರಿವು ಮೂಡಿಸುವ ಉದ್ದೇಶವನ್ನು ಆಯುಷ್ ಇಲಾಖೆ ಹೊಂದಿದೆ. ಭಾರತದಲ್ಲಿ ಮೊದಲಿನಿಂದ ಆಚರಿಸಲಾಗುತ್ತಿರುವ ಪದ್ಧತಿ ಮತ್ತು ಸಂಪ್ರದಾಯಗಳು ರೋಗವನ್ನು ತಡೆಗಟ್ಟುವ ದಿಸೆಯಲ್ಲಿ ಉತ್ತಮ ನೆರವಾಗುತ್ತಿವೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುವುದು ಉತ್ತಮ ಎಂದ ಅವರು, ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದರು.

ಸನಾತನ ಸಂಸ್ಕೃತಿಯ ಯೋಗವನ್ನು ಎಲ್ಲರೂ ಒಪ್ಪಿ ಅದನ್ನು ನಿರಂತರವಾಗಿ ಅಭ್ಯಸಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಹಿತ್ಲಳ್ಳಿಯ ಆಯುಷ್ ವೈದ್ಯ ಡಾ. ಚಂದ್ರಶೇಖರ್ ಯೋಗ ದಿನಾಚರಣೆ ನಿಮಿತ್ತ ಯೋಗೋತ್ಸವದ ಉದ್ದೇಶ ಹಾಗೂ ಅರಿವಿನ ಬಗ್ಗೆ ಮಾತನಾಡಿ, ಸ್ವಸ್ಥ ಸ್ವಾಸ್ಥ್ಯ ರಕ್ಷಣಂ ಎಂಬ ತತ್ವದಂತೆ ದೇಹದ ರಕ್ಷಣೆ ಸ್ವಚ್ಛತೆ, ದೇಹದ ದಂಡನೆ ಹಾಗೂ ದೇಹವನ್ನು ನಿಯಮಿತವಾಗಿ ನಿಯಂತ್ರಣ ಮಾಡುವಂತಹ ಯೋಗವನ್ನು ಎಲ್ಲರೂ ಅನುಸರಿಸಬೇಕು. ನಿಯಮಿತವಾಗಿ ನಿದ್ರೆ, ಆರೋಗ್ಯ ಹಾಗೂ ದೇಹವನ್ನು ದಂಡಿಸುವ ಕೆಲಸಗಳನ್ನು ಮಾಡಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಯೋಗೋತ್ಸವದ ಪೂರ್ವಭಾವಿಯಾಗಿ ಆಯುಷ್ ಇಲಾಖೆಯ ಯೋಗ ತರಬೇತುದಾರರಾದ ಪ್ರಿಯಾ ಹೆಗಡೆ ಮತ್ತು ವಾಣಿ ಭಟ್ಟ ಸುಲಭ ಯೋಗ, ದೈಹಿಕ ಆಸನ; ದೇಹವನ್ನು ಹುರಿಗೊಳಿಸುವ ಬಗೆಗೆ ಪ್ರಾತ್ಯಕ್ಷಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯಾಧ್ಯಾಪಕ ಫಾದರ್ ರೇಮಂಡ್ ಫರ್ನಾಂಡಿಸ್ ಮಾತನಾಡಿ, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿ ಯೋಗದ ಕುರಿತಾಗಿ ಜಾಗೃತಿ ಮೂಡಿಸಿದ್ದಾರೆ. ಜೂ. ೨೧ರಂದು ನಡೆಯಲಿರುವ ಯೋಗ ದಿನಾಚರಣೆಯಲ್ಲಿ ನಾವೆಲ್ಲರೂ ಪಾಲ್ಗೊಂಡು, ನಮ್ಮ ಜೀವನವನ್ನು ಶುದ್ಧಿಗೊಳಿಸಿಕೊಳ್ಳೋಣ ಎಂದರು.

ಮಾರ್ಗರೇಟ್ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವೆಂಕಟರಮಣ ಭಟ್ಟ ಸ್ವಾಗತಿಸಿದರು. ನೆಲ್ಸನ್ ಗೊನ್ಸಾಲ್ವಿಸ್ ನಿರ್ವಹಿಸಿದರು. ಎಂ. ರಾಜಶೇಖರ್ ವಂದಿಸಿದರು. ಪ್ರೌಢಶಾಲೆಯ ಸುಮಾರು ೧೮೦ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆಯಿಂದ ಭಿತ್ತಿಪತ್ರ ಮತ್ತು ಮಳೆಗಾಲದ ಸಂದರ್ಭದಲ್ಲಿ ಉಪಯುಕ್ತವಾಗುವ ಪ್ರಾಥಮಿಕ ಚಿಕಿತ್ಸಾ ಕಿಟ್‌ಗಳನ್ನು ಶಾಲೆಗಳಿಗೆ ವಿತರಿಸಲಾಯಿತು.