ಗ್ರಾಪಂಗಳಲ್ಲಿ ಜನನ ಮರಣ ನೋಂದಣಿ ಶುರು: ಪನ್ವಾರ

| Published : Jun 16 2024, 01:46 AM IST

ಸಾರಾಂಶ

ಯಾದಗಿರಿ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜನನ-ಮರಣಗಳ ನೋಂದಣಿ ನಿಯಮಗಳು ಹಾಗೂ ಇ-ಜನ್ಮ ತಂತ್ರಾಂಶದ ಕುರಿತು ತರಬೇತಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕ ನೋಂದಣಿ ಪದ್ಧತಿ ಬಲಪಡಿಸಲು ಜನನ-ಮರಣ ನೋಂದಣಿ ಕಾರ್ಯವನ್ನು ಇನ್ಮುಂದೆ ಗ್ರಾಮ ಪಂಚಾಯಿತಿಗಳಲ್ಲಿಯೂ ಮಾಡಿಸಬಹುದು ಎಂದು ಜಿಪಂ ಸಿಇಒ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲಾ ಗ್ರಾಪಂ ಕಾರ್ಯದರ್ಶಿಗಳಿಗೆ ಹಾಗೂ ಡೇಟಾ ಎಂಟ್ರಿ ಆಪರೇಟರ್ ಗಳಿಗೆ ಜನನ-ಮರಣಗಳ ನೋಂದಣಿ ನಿಯಮ ಹಾಗೂ ಇ-ಜನ್ಮ ತಂತ್ರಾಂಶದ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನನ-ಮರಣ ನೋಂದಣಿ ಮಾಡಿಸುವುದು ಅತ್ಯವಶ್ಯವಾಗಿದ್ದು, ಪ್ರತಿಯೊಬ್ಬರು ಜನನ ಮತ್ತು ಮರಣ ಪ್ರಮಾಣ ಪತ್ರಗಳ ಉಪಯೋಗಗಳನ್ನು ಅರಿತು ನೋಂದಣಿ ಮಾಡಿಸಬೇಕು. ನೋಂದಾವಣೆ ಮಾಡಲು ಗ್ರಾಪಂ ಕಾರ್ಯದರ್ಶಿಗಳನ್ನು ಜನನ-ಮರಣ ಉಪನೋಂದಣಿ ಅಧಿಕಾರಿಗಳಾಗಿ ನೇಮಕಗೊಂಡಿರುತ್ತಾರೆ ಎಂದರು.

ಇದುವರೆಗೆ ಜನನ-ಮರಣ ಆನ್ ಲೈನ್ ನೋಂದಣಿ ಪ್ರಕ್ರಿಯೆಯು ನಗರ, ತಾಲೂಕು ಪ್ರದೇಶಗಳಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆಯಲ್ಲಿ ಮಾತ್ರ ಅನುಷ್ಠಾನದಲ್ಲಿತ್ತು. ಈ ಪ್ರಕ್ರಿಯೆಯನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಜಾರಿಗೆ ತರಲಾಗಿದೆ ಎಂದರು.

ಅಧಿಕಾರಿಗಳು ಯಾವುದೇ ನೋಂದಣಿ ಬಿಟ್ಟು ಹೋಗದಂತೆ ಪಾರದರ್ಶಕವಾಗಿ ತ್ವರಿತಗತಿಯಲ್ಲಿ ಜನರಿಗೆ ಸೌಲಭ್ಯ ಒದಗಿಸಲು ಸೂಚಿಸಿದರು.

ಈ ವೇಳೆ ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನ್ನೋರ್, ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ಯೋಜನಾ ಅಂದಾಜು ಮೌಲ್ಯ ಮಾಪನ ಅಧಿಕಾರಿ ಕುಮಲಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣೆ ಪ್ರಭಾರಿ ಸಹಾಯಕ ನಿರ್ದೇಶಕ ನಾಗರಾಜ ನಾಗೂರ, ಸಹಾಯಕ ಸಾಂಖ್ಯಿಕ ಅಧಿಕಾರಿ ದತ್ತಾತ್ರೇಯ ಭಟ್ ಸೇರಿದಂತೆ ಇತರರಿದ್ದರು.