ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಜೊಲ್ಲೆ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ನಿಪ್ಪಾಣಿಯ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ₹1 ಕೋಟಿ ಮೊತ್ತದ ಶಶಿಕಲಾ ಜೊಲ್ಲೆ ವಿದ್ಯಾರ್ಥಿ ವೇತನ ಪುರಸ್ಕಾರ-2026 ಘೋಷಿಸಲಾಗಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಜೊಲ್ಲೆ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ನಿಪ್ಪಾಣಿಯ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ₹1 ಕೋಟಿ ಮೊತ್ತದ ಶಶಿಕಲಾ ಜೊಲ್ಲೆ ವಿದ್ಯಾರ್ಥಿ ವೇತನ ಪುರಸ್ಕಾರ-2026 ಘೋಷಿಸಲಾಗಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ಯಕ್ಸಂಬಾದ ಬೀರೇಶ್ವರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ವೇತನದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಉದ್ದೇಶದಿಂದ ಜೊಲ್ಲೆ ಶಿಕ್ಷಣ ಸಂಸ್ಥೆಯ ಕನಸಿನ ಅಣ್ಣಾಸಾಹೇಬ ಜೊಲ್ಲೆ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಈ ಬಾರಿ ₹1 ಕೋಟಿ ಮೊತ್ತದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೆಸರಿನ ವಿದ್ಯಾರ್ಥಿ ವೇತನ ಪುರಸ್ಕಾರ ಘೋಷಿಸಲಾಗಿದೆ. ಈ ಕುರಿತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹೇಳಿದರು.

ವೈದ್ಯಕೀಯ (ನೀಟ್) ಮತ್ತು ಇಂಜಿನಿಯರಿಂಗ್ (ಜೆಇಇ) ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊಂದಿರುವ 10ನೇ ತರಗತಿಯ ಪ್ರತಿಭಾವಂತ, ಅರ್ಹ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಪಿಯುಸಿ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವುದುಮೀ ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ ಎಂದರು.

ನಿಪ್ಪಾಣಿಯ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪಿಯು ವಿಜ್ಞಾನ ವಸತಿ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು 400 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪ್ರವೇಶ ಪರೀಕ್ಷೆಗಳನ್ನು ಜಿಲ್ಲೆಯ ವಿವಿಧ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಜ.4ರಂದು ಬೆಳಿಗ್ಗೆ 10ಕ್ಕೆ ನಿಪ್ಪಾಣಿಯ ಜೊಲ್ಲೆ ಶಿಕ್ಷಣ ಆವರಣ, ಮಧ್ಯಾಹ್ನ 12ಕ್ಕೆ ನಣದಿಯ ಜೊಲ್ಲೆ ಶಿಕ್ಷಣ ಆವರಣದಲ್ಲಿ ಏರ್ಪಡಿಸಲಾಗುವುದು. ಇನ್ನುಳಿದ ಪರೀಕ್ಷಾ ಕೇಂದ್ರಗಳ ಮಾಹಿತಿ, ದಿನಾಂಕ, ಸಮಯವನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.

ಜೊಲ್ಲೆ ಗ್ರುಪ್ ಏರ್ಪಡಿಸುವ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ 10 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರವೇಶವಿದೆ. ಪರೀಕ್ಷೆಯಲ್ಲಿ 11-20ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.75, 21-30 ಸ್ಥಾನ ಪಡೆದವರಿಗೆ ಶೇ.50 ಹಾಗೂ 31-ರಿಂದ 40 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಶುಲ್ಕ ರಿಯಾಯಿತಿ ಕಲ್ಪಿಸಲಾಗಿದೆ. ಪ್ರತಿ ಹಂತದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ 7 ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ, ಇನ್ನುಳಿದ 3 ಸ್ಥಾನ ಬೇರೆ ಬೇರೆ ಜಿಲ್ಲೆ ಹಾಗೂ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪಿಯು ವಿಜ್ಞಾನ ವಸತಿ ಮಹಾವಿದ್ಯಾಲಯ ಪ್ರಾಚಾರ್ಯ ದೀಪಕ ಪಾಟೀಲ, ಜೊಲ್ಲೆ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶಿವಾನಂದ ಪಾಟೀಲ, ಜೊಲ್ಲೆ ಗ್ರುಪ್ ಸಿಇಒ ವಿಜಯ ರಾವುತ, ಸಂಯೋಜಕ ಎಂ.ಎಂ.ಪಾಟೀಲ, ವಿ.ಆರ್.ಭಿವಸೆ ಉಪಸ್ಥಿತರಿದ್ದರು.