ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪ್ರಗತಿಸೌಧದಲ್ಲಿ ವಿಶ್ವ ಏಡ್ಸ್ ತಡೆ ದಿನಾಚರಣೆ-ಜಾಥಾ ಜಾಗೃತಿ ಕಾರ್ಯಕ್ರಮ ನಡೆಯಿತು.

ಉಡುಪಿ: ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪ್ರಗತಿಸೌಧದಲ್ಲಿ ವಿಶ್ವ ಏಡ್ಸ್ ತಡೆ ದಿನಾಚರಣೆ-ಜಾಥಾ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ. ಜಿ ಹುಬ್ಬಳ್ಳಿ, ಏಡ್ಸ್ ಬಗ್ಗೆ ಇಂದಿಗೂ ಸಮಾಜದಲ್ಲಿ ತಪ್ಪು ಕಲ್ಪನೆಗಳಿವೆ. ಅಸುರಕ್ಷಿತ ಲೈಂಕಿಕ ಕ್ರಿಯೆ ಅಥವಾ ರಕ್ತ ವರ್ಗಾವಣೆಯಿಂದಷ್ಟೇ ಈ ಕಾಯಿಲೆ ಬರುತ್ತದೆ, ಯುವಜನತೆ ಸಕ್ರಿಯವಾಗಿ ಏಡ್ಸ್ ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಇತರರಿಗೂ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದರು.

ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಏಡ್ಸ್ ನಿಯಂತ್ರಣಕ್ಕೆ ಸಂಸ್ಕಾರಯುಕ್ತ ಜೀವನ ಕ್ರಮದ ಬಗ್ಗೆ ಮಾತನಾಡಿದರು.

ಲಯನ್ಸ್ ಕ್ಲಬ್ - ಉಡುಪಿ ಲಕ್ಷ್ಯ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ಮನುಷ್ಯ ತನ್ನನ್ನು ನಿಯಂತ್ರಿಸಿಕೊಂಡು ಬದುಕಿದಾಗ ಏಡ್ಸ್ ನಂತಹ ಅನೇಕ ಸಮಸ್ಯೆಗಳಿಂದ ದೂರವಿರಬಹುದು ಎಂದರು. ಎಚ್ಐವಿ-ಏಡ್ಸ್ ನಿಯಂತ್ರಣದ ಬಗ್ಗೆ ಕೆಲಸ ಮಾಡಿದ ಐವರು ಸಾಧಕರನ್ನು ಸನ್ಮಾನಿಸಲಾಯಿತು.

ಭದ್ರಾವತಿಯ ಶ್ರೀ ಬಸವೇಶ್ವರ ವೀರಗಾಸೆ ಜಾನಪದ ಕಲಾತಂಡದವರು ವೀರಗಾಸೆ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಶ್ರೀ ಕ್ಷೇ.ಧ.ಗ್ರಾ.ಯೋ. ನಿರ್ದೇಶಕ ನಾಗರಾಜ ಶೆಟ್ಟಿ, ಏಡ್ಸ್ ಪೀಡಿತರ ಪರವಾಗಿ ಕೆಲಸ ಮಾಡುತ್ತಿರುವ ಸಂಜೀವ ವಂಡ್ಸೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ ಚಿದಾನಂದ ಸಂಜು ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ರಾವ್ ಸ್ವಾಗತಿಸಿ, ಮಂಜುನಾಥ ಗಾಣಿಗ ನಿರೂಪಿಸಿದರು., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್ ವಂದಿಸಿದರು.