ಕನ್ನಡಪ್ರಭ ವಾರ್ತೆ ರಾಮನಗರ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಯ ಸಮಗ್ರ ತನಿಖೆಗೆ ಒತ್ತಾಯಿಸಿ, ವಿರೋಧ ಪಕ್ಷ ಕಾಂಗ್ರೆಸ್ ರಾಷ್ಟ್ರ ವ್ಯಾಪ್ತಿ ನಡೆಸುತ್ತಿರುವ ಛಾತ್ರೋನ್ ಕಿ ಗೂಂಜ್ ಅಭಿಯಾನದಲ್ಲಿ ಪ್ರತಿ ಜಿಲ್ಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 25ರಿಂದ ಪ್ರಾರಂಭವಾಗಿರುವ ಛಾತ್ರೋನ್ ಕಿ ಗೂಂಜ್ ಅಭಿಯಾನ ಆಗಸ್ಟ್ 9ರವರೆಗೆ 40 ದಿನ ದೇಶದಾದ್ಯಂತ ನಡೆಯಲಿದೆ. ಈ ಅಭಿಯಾನದಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ನೀಟ್ ಪರೀಕ್ಷೆಯಲ್ಲಿ ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳು ಭಾಗಿಯಾಗಬೇಕು ಎಂದರು.
ನೀಟ್ ಪರೀಕ್ಷೆಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಕಳೆದ 10 ವರ್ಷಗಳಲ್ಲಿ 89 ಬಾರಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಅವ್ಯವಹಾರ ನಡೆದಿದೆ. ಇದರಿಂದ 6.5 ಕೋಟಿಗೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆಲ್ಲ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.ಇಷ್ಟೇ ಅಲ್ಲದೆ ನೀಟ್ ಪರೀಕ್ಷೆಗಾಗಿ ಒಂದು ವರ್ಷದಿಂದ ವಿದ್ಯಾರ್ಥಿಗಳು ತಯಾರಿ ನಡೆಸುತ್ತಾರೆ. ಪದೇ ಪದೇ ಪರೀಕ್ಷಾ ಅಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿವೆ. ಲಕ್ಷಾಂತರ ಆಕಾಂಕ್ಷಿಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.
ಮುರಿದು ಹೋದ ವಿದ್ಯಾರ್ಥಿಗಳ ನಂಬಿಕೆ:
ಹಲವು ವರ್ಷಗಳ ಸಿದ್ಧತೆಯ ಬಳಿಕ ಸುಮಾರು 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಆ ಪರೀಕ್ಷೆಯನ್ನು ಕೂಡ ಸರಿಯಾಗಿ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ಕಠಿಣ ಮತ್ತು ಮಹತ್ವದ ಪರೀಕ್ಷೆಯಾಗಿದ್ದರೂ, ಅದನ್ನು ಸಮರ್ಪಕವಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಈ ವಿಷಯವು ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಮರು ಪರೀಕ್ಷೆಗೆ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ತೀವ್ರವಾಗಿ ಕುಗ್ಗಿಸಿದೆ. ತಾವು ಓದಿದರೆ ಉತ್ತಮ ಅಂಕ ಪಡೆಯಬಹುದು ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಆ ನಂಬಿಕೆಯೇ ಮುರಿದುಹೋಗಿದೆ ಎಂದು ರಮೇಶ್ ಹೇಳಿದರು.ಈ ಅಭಿಯಾನವು ಪಕ್ಷಾತೀತವಾಗಿ ದೇಶದಾದ್ಯಂತ 28 ನಗರಗಳಲ್ಲಿ ನಡೆಯಲಿದ್ದು, 28 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅದರಂತೆ, ಬೆಂಗಳೂರಿನಲ್ಲಿ ಅಭಿಯಾನದ ಜವಾಬ್ದಾರಿ ಯುವ ಕಾಂಗ್ರೆಸ್‌ಗೆ ವಹಿಸಲಾಗಿದೆ. ಅಭಿಯಾನದ ಭಾಗವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶೀಘ್ರದಲ್ಲಿ ಬೆಂಗಳೂರಿಗೆ ಬರಲಿದ್ದಾರೆ ಎಂದರು.
ಅಭಿಯಾನದ ಪ್ರತಿ ವಾರಾಂತ್ಯದಲ್ಲಿ ಪಂಜಿನ ಮೆರವಣಿಗೆ, ಸಂವಾದ ಕಾರ್ಯಕ್ರಮ, ನೀಟ್ ವಿರೋಧಿ ಸಂಗೀತ ಕಚೇರಿ, ವಾಕಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ಶಾಸಕರ ಭವನದಲ್ಲಿ ಎಲ್ಲಾ ವಿದ್ಯಾರ್ಥಿಗಳ ಸಂಘಟನೆಗಳ ಜೊತೆ ಶನಿವಾರ ಸಭೆ ನಡೆಯಲಿದೆ. ಎಲ್ಲಾ ವಿಶ್ವವಿದ್ಯಾಲಯ, ಕಾಲೇಜುಗಳ ಪ್ರತಿ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ನೋಂದಣಿ ಮಾಡಿಸಲಾಗುವುದು. ಆ ಮೂಲಕ ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳ ಪರ ಇದ್ದಾರೆ ಎಂಬ ಸಂದೇಶ ರವಾನಿಸಲಾಗುವುದು ಎಂದು ರಮೇಶ್ ತಿಳಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ , ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಕೋಕಿಲಾ ರಾಣಿ, ಎನ್ ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ , ಪದಾಧಿಕಾರಿಗಳಾದ ಸುಫಿಯಾ, ಪ್ರವೀಣ್ , ಪುನೀತ್ , ಆದರ್ಶ, ಮುಖಂಡರಾದ ಸಿಎನ್ ಆರ್ ವೆಂಕಟೇಶ್ , ಕಾಂತರಾಜು, ವೆಂಕಟೇಶ್ , ಪೂರ್ಣಚಂದ್ರ ಕೀಕರ್ ಇದ್ದರು.
ಬೇಡಿಕೆಗಳೇನು?:- ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಪೇಪರ್ ಲೀಕ್ ಮಾಫಿಯಾ, ವೆಂಡರ್ ಗಳು, ಅಧಿಕಾರಿಗಳು ಮತ್ತು ರಾಜಕೀಯ ರಕ್ಷಣೆ ಜಾಲಗಳೊಂದಗೆ ಅವರಿಗಿರುವ ಸಂಪರ್ಕದ ಬಗ್ಗೆ ತನಿಖೆಯಾಗಬೇಕು.
- ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು. ಪೇಪರ್ ಸೆಟ್ಟಿಂಗ್ , ಪ್ರಿಂಟಿಂಗ್ , ಸಾರಿಗೆ, ಪರೀಕ್ಷಾ ಕೇಂದ್ರಗಳು, ಡಿಜಿಟಲ್ ವ್ಯವಸ್ಥೆಗಳು ಮತ್ತು ವೆಂಡರ್ ಒಪ್ಪಂದಗಳನ್ನು ಆಡಿಟ್ (ತಪಾಸಣೆ)ಮಾಡಬೇಕು. ಇನ್ನು ಮುಂದೆ ಯಾವುದೇ ಪೇಪರ್ ಲೀಕ್ ಆಗಬಾರದು.- ನಿರ್ದಿಷ್ಟ ವಾರ್ಷಿಕ ಪರೀಕ್ಷೆ ಮತ್ತು ನೇಮಕಾತಿ ಕ್ಯಾಲೆಂಡರ್ ಜಾರಿಗೆ ತರಬೇಕು. ಪರೀಕ್ಷಾ ದಿನಾಂಕಗಳು, ಫಲಿತಾಂಶದ ದಿನಾಂಕಗಳು ಮತ್ತು ಉದ್ಯೋಗಕ್ಕೆ ಸೇರುವ ಸಮಯವನ್ನು ಮುಂಚಿತವಾಗಿ ಘೋಷಿಸಬೇಕು. ಮತ್ತು ಅದನ್ನು ಕಡ್ಡಾಯವಾಗಿ ಪಾಲಿಸಬೇಕು.