ಕನ್ನಡಪ್ರಭ ವಾರ್ತೆ, ತುಮಕೂರು
ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆಯನ್ನು ರೈತರ ಹಿತದೃಷ್ಠಿಯಿಂದ ಕೈ ಬಿಡುವುದು ಒಳ್ಳೆಯದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಸಲಹೆ ಮಾಡಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಯಾರದೋ ಮೇಲಿನ ಹಠಕ್ಕೆ ಬಿದ್ದು ರೈತರ ಹಿತಕಾಯದೆ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಾಣ ಅಗತ್ಯವಿಲ್ಲ. ಒಮ್ಮೆ ಯೋಚಿಸಿ, ಅಲ್ಲಿನ ರೈತರ ಆಶೋತ್ತರಗಳಿಗೆ ಒತ್ತು ಕೊಡುವುದು ಮುಖ್ಯ. ದಯವಿಟ್ಟು ಈ ಯೋಜನೆ ಕೈ ಬಿಟ್ಟು ಬೇರೆ ಯೋಜನೆ ಕೈಗೆತ್ತಿಕೊಂಡರೆ ನಿಮಗೂ, ರಾಜ್ಯಕ್ಕೂ ಹಾಗೂ ರೈತರಿಗೂ ಒಳ್ಳೆಯದಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮುಖ್ಯಮಂತ್ರಿಗಳು ಬುದ್ಧಿವಂತರಿದ್ದಾರೆ. ಲವಲವಿಕೆಯಿಂದ ಕೆಲಸ ಮಾಡುವ ಇಚ್ಛೆ ಹೊಂದಿದ್ದಾರೆ. ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಸಾವಿರಾರು ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡುವುದರಿಂದ ಏನೂ ಆಗುವುದಿಲ್ಲ. ಬೇಕಾದರೆ ನಗರದಿಂದ 10 ಕಿ.ಮೀ. ದೂರದಲ್ಲ ಉಪನಗರ, ಸ್ಯಾಟ್‌ಲೈಟ್ ಟೌನ್‌ಗಳ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಈ ಬಗ್ಗೆ ಒಮ್ಮೆ ಯೋಚಿಸಿ, ಜನರ ಒತ್ತಾಯಕ್ಕೆ ಮಣಿಯುವುದಕ್ಕಿಂತ ದೊಡ್ಡತನ ಮತ್ತೊಂದಿಲ್ಲ. ಇತಿಹಾಸದಲ್ಲಿ ಉಳಿದುಕೊಳ್ಳುತ್ತೀರಾ, ದಯವಿಟ್ಟು ಈ ಯೋಜನೆ ಕೈ ಬಿಡಿ ಎಂದು ಮನವಿ ಮಾಡಿ, ಮುಂದಿನ ಯೋಜನೆಗಳು ಸಾಕಷ್ಟಿವೆ ಎಂದರು.ಕುಮಾರಸ್ವಾಮಿಯವರು ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಬಿಡದಿಯಲ್ಲಿ ಟೌನ್‌ಶಿಪ್ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು. ಆದರೆ ಬಳಿಕ ಅದರ ಸಾಧಕ-ಬಾಧಕಗಳನ್ನು ನೋಡಿ ಅಲ್ಲಿ ಟೌನ್‌ಶಿಪ್ ಮಾಡುವುದು ಬೇಡ ಎಂದು ತೀರ್ಮಾನಿಸಿದರು. ಹಾಗಾಗಿ 2ನೇ ಬಾರಿಗೆ ಮುಖ್ಯಮಂತ್ರಿಗಳಾದಾಗಲೂ ಆ ಯೋಜನೆ ಕೈಗೆತ್ತಿಕೊಳ್ಳಲಿಲ್ಲ ಎಂದ ಅವರು, ಎಲ್ಲೋ ಒಂದು ಕಡೆ ಒಬ್ಬರಿಗೆ ಒಬ್ಬರು ಹಠಕ್ಕೆ ಬಿದ್ದು ಈ ಯೋಜನೆ ಮಾಡುವುದಕ್ಕೆ ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನೀವು ಏನಾದರೂ ಹೊಸ ಯೋಜನೆಗಳನ್ನು ಮಾಡಬೇಕು ಎನ್ನುವುದಾದರೆ ಬೈರಮಂಲದ ಕೆರೆಗೆ 50-60 ವರ್ಷಗಳಿಂದ ಕೊಳಚೆ ನೀರು ಹೋಗುತ್ತಿದೆ. ಟೊಯೋಟಾ, ಕಿರ್ಲೋಸ್ಕರ್ ನಂತಹ ದೊಡ್ಡ ದೊಡ್ಡ ಕಂಪೆನಿಗಳಿಂದ ಎಷ್ಟರ ಮಟ್ಟಿಗೆ ಅನೈರ್ಮಲ್ಯ ಉಂಟಾಗುತ್ತಿದೆ. ಆ ಬಗ್ಗೆ ಯೋಚನೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸಚಿವ ಸೋಮಣ್ಣ ಮನವಿ ಮಾಡಿದರು.
ಮೆಟ್ರೋ, ಸಬ್ಅ ರ್ಬನ್ ರೈಲುಗಳು ಬರುತ್ತಿವೆ. ಆದರೂ ರೈತರಿಗೆ ಇದ್ಯಾವುದರ ಅವಶ್ಯಕತೆ ಇಲ್ಲ. ಟೌನ್ ಶಿಪ್ ಯೋಜನೆಯಿಂದಾಗಿ ರೈತರಿಗೆ ಹಿಂಸೆ ಕೊಡುವುದು, ಅನಾನುಕೂಲ ಮಾಡುವುದು ಸರಿಯಲ್ಲ. ನಾನು ಕೇಂದ್ರ ಸಚಿವನಾಗಿ, ಒಬ್ಬ ಸಂಸದನಾಗಿ ಮಾತನಾಡುತ್ತಿಲ್ಲ, ಒಬ್ಬ ಸಾಮಾನ್ಯ ಪ್ರಜೆಯಾಗಿ ಮನವಿ ಮಾಡುತ್ತಿದ್ದೇನೆ ಎಂದರು. ಯಾರಿಗೂ ಯಾವುದೂ ಶಾಶ್ವತವಲ್ಲ, ಮತ್ತೊಮ್ಮೆ ಈ ಯೋಜನೆ ಸಂಬಂಧ ಪುನರ್ ಪರಿಶೀಲಿಸಿ ಎಂದು ಅವರು ಮನವಿ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡರ ಆದಿಯಾಗಿ ನಮ್ಮ ಪಕ್ಷದ ಬಹುತೇಕರು ಈ ಯೋಜನೆ ಬೇಡ ಎಂದು ಮನವಿಮಾಡಿದ್ದಾರೆ. ತಾವು ತಮ್ಮ ಅನುಭವ ಹಂಚಿಕೊಂಡು ಬಿಡದಿ ಟೌನ್‌ಶಿಪ್ ಕೈ ಬಿಡುವುದು ಒಳ್ಳೆಯದು ಎಂದು ಅವರು ಪುನರುಚ್ಚರಿಸಿದರು. ಈ ಹಿಂದೆ ನಾನು ಸಚಿವರನಾಗಿದ್ದಾಗ ಸೂರ್ಯನಗರವನ್ನು 1, 2, 3 ಮೂರು ಹಂತದಲ್ಲ ಅಭಿವೃದ್ದಿ ಮಾಡಿದ್ದೇವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಹ ಮಾಡಲಾಗಿದೆ. ಅದರ ಶ್ರಮ ಬಿಜೆಪಿ ಪಕ್ಷಕ್ಕೆ ಸೇರಿದ್ದು ಎಂದರು.