ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನಾಂಗದಲ್ಲಿದ್ದು, ಭಾರತ ಬದಲಾವಣೆಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ಅದರ ಭಾಗವಾಗಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕರೆ ನೀಡಿದರು.ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎಸ್ ಸಿ, ಎಸ್ ಟಿ, ವಿದ್ಯಾರ್ಥಿಗಳಿಗೆ ಸ್ಪಂದನ ವಿದ್ಯಾರ್ಥಿವೇತನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಚಿಂತನೆ ಬದಲಾಗಬೇಕಿದ್ದು, ಸಂಸದೀಯ ಪ್ರಜಾಪ್ರಭುತ್ವದ ಆಶಯ ಮತ್ತು ತತ್ವಗಳು ಹಾಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದನ್ನು ತೊಡೆದುಹಾಕುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ದೇಶದ ಭವಿಷ್ಯ ರೂಪಿಸಬೇಕು. ನಿಮ್ಮ ಭವಿಷ್ಯವನ್ನು ನೀವೇ ಕಟ್ಟಿಕೊಳ್ಳಿ ಎಂಬ ಬಿ.ಆರ್. ಅಂಬೇಡ್ಕರ್ ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರ್‍ಯಾಂಕ್ ಪಡೆದವರು ಮಾತ್ರ ಬುದ್ಧಿವಂತರು ಎಂಬ ಭಾವನೆ ಸರಿಯಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದ್ದು, ಅವಕಾಶ ದೊರೆತರೆ ಏನನ್ನಾದರೂ ಸಾಧಿಸಬಹುದು. ಅವಕಾಶ ಪಡೆಯುವುದು ಪ್ರತಿಯೊಬ್ಬರ ಹಕ್ಕು ಎಂದರು.ಯಶಸ್ಸಿನ ಹಾದಿಯಲ್ಲಿ ಏರಿಳಿತಗಳು ಸಹಜ. ಆರಂಭದಲ್ಲಿ ಲಾಭ ಕಾಣದಿದ್ದರೂ ದೃಢಸಂಕಲ್ಪದಿಂದ ಮುನ್ನಡೆದ ಉದ್ಯಮಿ ಸಂದೀಪ್ ರೆಡ್ಡಿ ಇಂದು ಯಶಸ್ಸು ಕಂಡಿದ್ದಾರೆ. ವಿದ್ಯಾರ್ಥಿಗಳೂ ಸೋಲಿಗೆ ಹೆದರದೆ ಧೈರ್ಯದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ತಮ್ಮ ತಾಯಿ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರದಿದ್ದರೂ ಉತ್ತಮ ಶಿಕ್ಷಣ ನೀಡಿದ ಕಾರಣ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಲು ಸಾಧ್ಯವಾಯಿತು. ಆದ್ದರಿಂದ ಯುವಜನತೆ ತಂದೆ-ತಾಯಿಗಳಿಗೆ ಗೌರವ ನೀಡಬೇಕು. ಗುಣವಂತ ಮತ್ತು ಬದ್ಧತೆಯುಳ್ಳ ನಾಯಕ ಸಂದೀಪ್ ರೆಡ್ಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಮುಂದಾಗಿದ್ದಾರೆ. ಅವರ ಕನಸು ನನಸಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜವಾಬ್ದಾರಿಯುತ ನಾಗರಿಕರಾಗಬೇಕು. ಆಗ ಮಾತ್ರ ಸ್ಪಂದನ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ನಿಜವಾದ ಗೌರವ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ, ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ವೆಂಕಟರೋಣಪ್ಪ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ, ಸಿಪಿಐಎಂ ನ ಎಸ್.ಲಕ್ಷ್ಮಯ್ಯ. ವಾಲ್ಮೀಕಿ ಸಂಘದ ಮುನಿಕೃಷ್ಣ, ಬಿಎಸ್‌ಪಿ ಮುಖಂಡ ಮುನಿಕೃಷ್ಣಪ್ಪ, ರೈತ ಜನ ಸೇನಾ ಜನನಾಯಕಿ ಸಿ.ಎನ್.ಸುಷ್ಮಾಶ್ರೀನಿವಾಸ್, ಅಣಕನೂರು ವೆಂಕಟೇಶ್ ಮತ್ತಿತರರು ಇದ್ದರು. ಸಿಕೆಬಿ-2
ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪಂದನ ವಿದ್ಯಾರ್ಥಿ ವೇತನ-2026 ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.