ವಿಜಯಪುರ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳವಣಿಗೆಗೆ ಆರ್ಥಿಕ ನೆರವು ನೀಡಿದವರನ್ನು ಸದಾ ನೆನಪಿಸಿಕೊಳ್ಳಬೇಕು ಹಾಗೂ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡು IAS, KAS ನಂತಹ ಉನ್ನತ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಕ ಬಿ.ವಿನಯ್ ಕುಮಾರ್ ಕರೆ ನೀಡಿದರು.

ಪಟ್ಟಣದಲ್ಲಿ ನಗರ್ತ ಯುವಕ ಸಂಘ ಮತ್ತು ಕೋರಮಂಗಲ ರುದ್ರಪ್ಪ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸವಲತ್ತು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಾಲ್ಯದ ಕಠಿಣ ಪರಿಶ್ರಮ ಮತ್ತು ಸಾಧನೆಯನ್ನು ಸ್ಮರಿಸಿ, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಸಂಘಟಕರ ಮತ್ತು ಗಣ್ಯರ ನುಡಿ

ಯೋಜನಾ ನಿರ್ದೇಶಕ ಎ. ಮಧು ಮಾತನಾಡಿ, ೧೯೯೭ರಲ್ಲಿ ಕೇವಲ ೫ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರತಿಭಾ ಪುರಸ್ಕಾರ ಇಂದು ಬೃಹತ್ ಆಗಿ ಬೆಳೆದಿದೆ. ನೆರವು ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜಕ್ಕೆ ಸತ್ಕೊಡುಗೆ ನೀಡಬೇಕು ಎಂದು ಹೇಳಿದರು.

ಕೋರಮಂಗಲ ರುದ್ರಪ್ಪ ಟ್ರಸ್ಟ್‌ ಅಧ್ಯಕ್ಷ ಭಾಸ್ಕರ್ ಮಾತನಾಡಿ, ೧೯೩೪ರಲ್ಲಿ ಆರಂಭವಾದ ಈ ಟ್ರಸ್ಟ್ ಹೊರಗಿನ ವಿದ್ಯಾರ್ಥಿಗಳಿಗೆ ವಸತಿ, ವಿದ್ಯಾರ್ಥಿವೇತನ, ದೇವಸ್ಥಾನಗಳ ಸೇವೆ ಹಾಗೂ ಜೀವರಾಶಿಗಳ ಪಾಲನೆಯನ್ನು ಮೂಲ ಉದ್ದೇಶವಾಗಿಸಿಕೊಂಡು ಬಂದಿದೆ ಎಂದರು.


ನಗರ್ತ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ, ನಗರ್ತ ಜನಾಂಗವು ದಾನ-ಧರ್ಮಕ್ಕೆ ಶ್ರೇಷ್ಠವಾಗಿದೆ. ಮಕ್ಕಳು ಚೆನ್ನಾಗಿ ವ್ಯಾಸಂಗ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮೀನಾಕುಮಾರಿ ಸುರೇಶ್ ಬಾಬು ಅವರು ಪೋಷಕರಾದ ತುಪ್ಪದ ಚಿಕ್ಕವೀರಭದ್ರಪ್ಪ- ವೇದವತಮ್ಮ ಮಣ್ಣೆಪ್ಪ ಸ್ಮರಣಾರ್ಥ ೫೦,೦೦೧ ರು., ಹಿರಿಯರಾದ ಡಿ.ಸಿ.ಚಿಕ್ಕಣ್ಣ ೫,೦೦೦ ರು. ಮತ್ತು ವಿ. ವಿನಯ್ ಕುಮಾರ್ ರು. ೫,೦೦೦ ಪ್ರೋತ್ಸಾಹ ಧನ ನೀಡಿದರು.

ಇದೇ ವೇಳೆ ಐವರು SSLC ಹಾಗೂ 9 PUಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜೊತೆಗೆ ೩೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸವಲತ್ತುಗಳನ್ನು ವಿತರಿಸಲಾಯಿತು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾಂತೀನಮಠ ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್ ಶಿವಕುಮಾರ್, ಸಂಘದ ಗೌರವಾಧ್ಯಕ್ಷ ಮ. ಸುರೇಶ್ ಬಾಬು, ಕಾರ್ಯದರ್ಶಿ ಆರ್. ವಿಶ್ವಾಸ್, ಸಹ ಕಾರ್ಯದರ್ಶಿ ಸುಮನ್, ಯೋಜನಾ ನಿರ್ದೇಶಕ ವಿ. ಹರ್ಷ, ಮಾಜಿ ಗೌರವಾಧ್ಯಕ್ಷರಾದ ಎನ್. ರುದ್ರಮೂರ್ತಿ, ಬಿಸಿ ಸಿದ್ಧರಾಜು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರದಲ್ಲಿ ನಗರ್ತ ಯುವಕ ಸಂಘ ಮತ್ತು ಕೋರಮಂಗಲ ರುದ್ರಪ್ಪ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.