ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿರಣ್‌ ಜಿ. ಗೌರಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಸ್ತು, ಸಂಯಮದೊಂದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಹೇಳಿದರು.ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ‌ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಕೆ ಬಿ ಉತ್ಸವ-2025 ಸಮಾರಂಭ ಉದ್ಘಾಟಿಸಿದ ಮಾತನಾಡಿದ ಅವರು ವಾರ್ಷಿಕೋತ್ಸವ ಎಂದರೆ ವಿದ್ಯಾರ್ಥಿಗಳ ವಾರ್ಷಿಕ ಹಬ್ಬವಾಗಿದ್ದು ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು.

ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ಸಂಸ್ಕಾರ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡು ಗುರುಹಿರಿಯರ‌ ಬಗ್ಗೆ ಗೌರವ ತೋರುವುದು ಅಗತ್ಯವಿದೆ. ಕಠಿಣ ಪರಿಶ್ರಮದಿಂದ ಕಲಿತು ಸುಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪುಟ್ಟರಾಜು ಮಾತನಾಡಿ, ಶಿಕ್ಷಣ ವಿದ್ಯಾರ್ಥಿಗಳ ‌ಮನಸ್ಸನ್ನು, ಬೌದ್ದಿಕ ಸಾಮರ್ಥ್ಯವನ್ನು ವಿಕಸನಗೊಳಿಸುತ್ತದೆ. ಶಿಕ್ಷಣದ ಮೂಲ, ಪಠ್ಯಪುಸ್ತಕಗಳಲ್ಲಿನ ವಿಚಾರಗಳ ಇತಿಹಾಸದ ಬಗ್ಗೆ ಅರಿವು ಹೊಂದುವುದು ಅವಶ್ಯಕವಿದೆ. ಪಡೆದ ಶಿಕ್ಷಣಕ್ಕೆ ತಕ್ಕಂತಹ ಉತ್ತಮ ನಡವಳಿಕೆ ವಿದ್ಯಾರ್ಥಿಗಳಲ್ಲಿ ಕಂಡುಬರಬೇಕಿದೆ ಎಂದರು.

ಪ್ರಸಕ್ತ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ‌ ಕ್ಷೀಣಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಈ ಬಗ್ಗೆ ಪೋಷಕರು, ವಿದ್ಯಾರ್ಥಿಗಳು ಚಿಂತನೆ ಹರಿಸಬೇಕಿದೆ ಎಂದು ಕರೆ ನೀಡಿದರು. ಶಿಕ್ಷಣ ನೀತಿಯ ಬದಲಾವಣೆಯ ಅಗತ್ಯತೆ ಬಗ್ಗೆ ಮಾತನಾಡಿ, ಯಾರು ಕೂಡ ಶಿಕ್ಷಣದಿಂದ ವಿಮುಖರಾಗಬಾರದು ಎಂದರು.ಕನ್ನಡ ಭಾರತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಶಾಂತಕುಮಾರ್ ಹಾಗೂ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕಿ ಸ್ಮಿತಾ ಅವರು 2025-26ನೇ ಸಾಲಿನ ಶೈಕ್ಷಣಿಕ ವರದಿ ವಾಚಿಸಿದರು.

ಕುಶಾಲನಗರದ ಪ್ರಧಾನ ಗೌತಮ್ ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣ ಬಿ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಬೈಲುಕೊಪ್ಪೆಯ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಮಂಜುನಾಥ್ ಬಿ, ಕೆ ಬಿ ಕಾಲೇಜು ಆಡಳಿತಾಧಿಕಾರಿ ಜಯವರ್ಧನ್, ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರುದ್ರಪ್ಪ ಸೇರಿದಂತೆ ಉಪನ್ಯಾಸಕ ವೃಂದದವರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಪೋಷಕರು ಇದ್ದರು.

ಇದೇ ಸಂದರ್ಭ ತಾಲೂಕು ದಂಡಾಧಿಕಾರಿ ಕಿರಣ್ ಜಿ ಗೌರಯ್ಯ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಬಿ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.