ಬೆಂಗಳೂರು: ಶುಲ್ಕ ಹಿಂಪಡೆಯಲು ಕೆಇಎಗೆ ವಿದ್ಯಾರ್ಥಿಗಳ ಅಲೆದಾಟ

| Published : Feb 10 2024, 01:46 AM IST / Updated: Feb 10 2024, 12:26 PM IST

KEA
ಬೆಂಗಳೂರು: ಶುಲ್ಕ ಹಿಂಪಡೆಯಲು ಕೆಇಎಗೆ ವಿದ್ಯಾರ್ಥಿಗಳ ಅಲೆದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಸಾಲಿನ ಸಿಇಟಿ ಸೀಟುಗಳ ಪ್ರವೇಶ ಪ್ರಕ್ರಿಯೆ ವೇಳೆ ತಾಂತ್ರಿಕ ಕಾರಣಗಳಿಂದ ಒಂದೇ ಸೀಟಿಗೆ ಎರಡು ಬಾರಿ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ಹಾಗೂ ಹಂಚಿಕೆಯಾಗಿದ್ದ ಸೀಟು ರದ್ದುಪಡಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದುವರೆಗೂ ಶುಲ್ಕ ಮರು ಪಾವತಿಸಿಲ್ಲ.

ಲಿಂಗರಾಜು ಕೋರಾ ಕನ್ನಡಪ್ರಭ ವಾರ್ತೆ, ಬೆಂಗಳೂರು

ಕಳೆದ ಸಾಲಿನ ಸಿಇಟಿ ಸೀಟುಗಳ ಪ್ರವೇಶ ಪ್ರಕ್ರಿಯೆ ವೇಳೆ ತಾಂತ್ರಿಕ ಕಾರಣಗಳಿಂದ ಒಂದೇ ಸೀಟಿಗೆ ಎರಡು ಬಾರಿ ಶುಲ್ಕ ಪಾವತಿಸಿರುವ (ಡಬಲ್‌ ಪೇಮೆಂಟ್‌) ವಿದ್ಯಾರ್ಥಿಗಳು ಹಾಗೂ ಹಂಚಿಕೆಯಾಗಿದ್ದ ಸೀಟು ರದ್ದುಪಡಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದುವರೆಗೂ ಶುಲ್ಕ ಮರು ಪಾವತಿಸಿಲ್ಲ.

ಇದರಿಂದ ತಮ್ಮದಲ್ಲದ ತಪ್ಪಿಗೆ ಹಲವು ವಿದ್ಯಾರ್ಥಿಗಳು ತಾವು ಪಾವತಿಸಿದ್ದ ಶುಲ್ಕ ವಾಪಸ್‌ ಪಡೆಯಲು ಬೆಂಗಳೂರು ಮಾತ್ರವಲ್ಲದೆ ದೂರದ ಊರುಗಳಿಂದ ನಿತ್ಯ ಮಲ್ಲೇಶ್ವರಂನ ಕೆಇಎ ಕಚೇರಿಗೆ ಒಬ್ಬರಲ್ಲ ಒಬ್ಬರಂತೆ ಅಲೆಯುತ್ತಿದ್ದಾರೆ. ಪ್ರಾಧಿಕಾರದ ಈ ವಿಳಂಬ ಧೋರಣೆಯಿಂದ ಬೇಸತ್ತಿರುವ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬರುತ್ತಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2024ನೇ ಸಾಲಿನ ಸಿಇಟಿ ನೋಂದಣಿ ಪ್ರಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸಲು ಕೆಲ ಸಿಬ್ಬಂದಿಯನ್ನು ಕಚೇರಿಯ ಹೊರಗೆ ಲಭ್ಯವಿರಿಸಿದೆ. 

ಆದರೆ, ಇಲ್ಲಿಗೆ ಬರುತ್ತಿರುವ ವಿದ್ಯಾರ್ಥಿಗಳ ಪೈಕಿ 2023ನೇ ಸಾಲಿನ ಸಿಇಟಿ ಸೀಟುಗಳ ಪ್ರವೇಶ ಪ್ರಕ್ರಿಯೆ ವೇಳೆ ತಾಂತ್ರಿಕ ಕಾರಣದಿಂದ ಒಂದೇ ಸೀಟಿಗೆ ಎರಡು ಬಾರಿ ಶುಲ್ಕ ಪಾವತಿಸಿದವರು, ಸೀಟು ರದ್ದುಪಡಿಸಿಕೊಂಡವರು ತಮ್ಮ ಶುಲ್ಕ ಇದುವರೆಗೂ ಮರುಪಾವತಿ ಆಗಿಲ್ಲ. ಯಾವಾಗ ಕೊಡುತ್ತೀರಿ ಎಂದು ಗೋಗರೆಯುತ್ತಿದ್ದಾರೆ.

ಆದರೆ, ಪ್ರಾಧಿಕಾರದಿಂದ ಮಾತ್ರ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಕಳೆದ ನಾಲ್ಕೈದು ತಿಂಗಳಿಂದ ಪ್ರತೀ ಬಾರಿ ಬಂದಾಗಲೂ ಮುಂದಿನ ವಾರ, 15 ದಿನದಲ್ಲಿ, ಇಲ್ಲ ಮುಂದಿನ ತಿಂಗಳು ಶುಲ್ಕ ನಿಮ್ಮ ಅಕೌಂಟಿಗೆ ಬರುತ್ತದೆ ಎಂಬ ಸಿದ್ಧ ಉತ್ತರವನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಆದರೆ, ಇದುವರೆಗೂ ನಮ್ಮ ಶುಲ್ಕ ಮರು ಪಾವತಿಯಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಇತ್ತೀಚೆಗೆ ಮಲ್ಲೇಶ್ವರದ ಕೆಇಎ ಕಚೇರಿಗೆ ‘ಕನ್ನಡಪ್ರಭ’ ಭೇಟಿ ನೀಡಿದಾಗ, ರಾಮನಗರದ ಫಾರ್ಮಸಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಚಿತ್ರದುರ್ಗ ಮೂಲದ ಅಮರ್‌ (ಹೆಸರು ಬದಲಿಸಿದೆ) ಎಂಬ ವಿದ್ಯಾರ್ಥಿಯೊಬ್ಬ ತಾಂತ್ರಿಕ ಕಾರಣದಿಂದ ಒಂದೇ ಸೀಟಿಗೆ ಕೆಇಎ ನನ್ನ ಬಳಿ ಎರಡು ಬಾರಿ ಶುಲ್ಕ ಪಾವತಿಸುವಂತೆ ಹೇಳಿತ್ತು. ಅದರಲ್ಲಿ ಒಂದು ಶುಲ್ಕ ವಾಪಸ್‌ ಬರಲಿದೆ ಎಂದು ಹೇಳಿತ್ತು. ಆದರೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಟ್ಟಿದ್ದ ಶುಲ್ಕ ಇದುವರೆಗೂ ಮರುಪಾವತಿಯಾಗಿಲ್ಲ ಎಂದು ಹೇಳಿದ್ದಾರೆ.

ಅದೇ ರೀತಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ತನಗೆ ಕಳೆದ ವರ್ಷ ಆಚಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿಕ್ಕ ಸೀಟು ರದ್ದುಪಡಿಸಿಕೊಂಡಿದ್ದ ಶುಲ್ಕವನ್ನು ಕೆಇಎ ಇದುವರೆಗೆ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿದರು. 

ಇದು ಉದಾಹರಣೆಯಷ್ಟೆ ಈ ರೀತಿ ಶುಲ್ಕ ಮರುಪಾವತಿಗಾಗಿ ಹತ್ತಾರು ವಿದ್ಯಾರ್ಥಿಗಳು ನಿತ್ಯ ಕೆಇಎ ಗೇಟು ಬಡಿಯುತ್ತಿದ್ದಾರೆ. ಆದರೆ, ಆ ವಿದ್ಯಾರ್ಥಿಗಳಿಗೆ ಕೆಇಎ ಅಧಿಕಾರಿಗಳಿಂದ ಶುಲ್ಕ ಯಾವಾಗ ಬರುತ್ತದೆ ಎಂಬ ಬಗ್ಗೆ ಸಮರ್ಪಕ ಉತ್ತರ ಮಾತ್ರ ಸಿಗುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಲಿಲ್ಲ. ಆದರೆ, ಪ್ರಾಧಿಕಾರದ ಇನ್ನು ಕೆಲ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇಂತಹ ಶುಲ್ಕ ಮರುಪಾವತಿ ಪ್ರಕ್ರಿಯೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. 

ಹಂತ ಹಂತವಾಗಿ ವೈದ್ಯಕೀಯ, ಎಂಜಿನಿಯರಿಂಗ್‌, ಡಿಪ್ಲೊಮಾ ಹೀಗೆ ಸಂಬಂಧಿಸಿದ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೂ ನಡೆಯುತ್ತಿದೆ. ನರ್ಸಿಂಗ್‌ ಹೊರತುಪಡಿಸಿ ಉಳಿದೆಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಯಾಗಬೇಕಿದ್ದ ಪ್ರಕರಣಗಳಲ್ಲಿ ಶೇ.90ರಷ್ಟು ಪಾವತಿಯಾಗಿವೆ. ಇನ್ನು ಶೇ.10ರಷ್ಟು ಉಳಿದಿದೆ. ಅಂತಹ ಸುಮಾರು 2000 ಪ್ರಕರಣಗಳು ಇರಬಹುದು ಎಂದಿದ್ದಾರೆ.

ಇವುಗಳಲ್ಲಿ ಬಹಳಷ್ಟು ಮಂದಿ ಬ್ಯಾಂಕ್‌ ಅಕೌಂಟ್‌ ನಂಬರ್‌ ತಪ್ಪು ನೀಡಿದ್ದಾರೆ. ಇನ್ನು ಕೆಲ ತಾಂತ್ರಿಕ ಕಾರಣಗಳಿಂದ ಶುಲ್ಕ ಮರುಪಾವತಿಯಾಗಿಲ್ಲ. ಅಂತಹ ಪ್ರಕರಣಗಳಲ್ಲಿ ತಮ್ಮ ತಪ್ಪು ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಸರಿಯಾದ ಮಾಹಿತಿ ನೀಡಿದರೆ ತಕ್ಷಣ ಶುಲ್ಕ ಮರುಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.