ಅಂಗನವಾಡಿ ಯೋಜನೆಯ ₹15 ಕೋಟಿ ಪೋಲು: ಸಿರಾಜ್‌ ಶೇಕ್‌

| Published : Feb 10 2024, 01:46 AM IST

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಂಗನವಾಡಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಜಿಲ್ಲೆಯ ಆರು ತಾಲೂಕುಗಳಲ್ಲಿ ಯೋಜನೆ ಹಳ್ಳ ಹಿಡಿದಿದೆ.

ಹೊಸಪೇಟೆ: ಜಿಲ್ಲೆಯಲ್ಲಿ ಅಂಗನವಾಡಿ ಯೋಜನೆ ಹಳ್ಳ ಹಿಡಿದಿದೆ. ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಅಂಗನವಾಡಿ ಕೇಂದ್ರಗಳಿಗೆ ನವೆಂಬರ್‌, ಡಿಸೆಂಬರ್‌ ಮತ್ತು ಜನವರಿ ತಿಂಗಳಿನಿಂದ ಮಕ್ಕಳಿಗೆ ಆಹಾರ ನೀಡಲಾಗುತ್ತಿಲ್ಲ. ಮೂರು ತಿಂಗಳಲ್ಲಿ ₹15 ಕೋಟಿ ಪೋಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಕ್ರಮವಹಿಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್‌ ಶೇಕ್‌ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಂಗನವಾಡಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಜಿಲ್ಲೆಯ ಆರು ತಾಲೂಕುಗಳಲ್ಲಿ ಯೋಜನೆ ಹಳ್ಳ ಹಿಡಿದಿದೆ. ಮಕ್ಕಳ ಆಹಾರ ಪದಾರ್ಥದಲ್ಲೂ ದುಡ್ಡು ಹೊಡೆದರೆ, ಅವರಿಗೆ ಪಾಪ ಸುತ್ತಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ 1500ಕ್ಕೂ ಅಧಿಕ ಕೇಂದ್ರಗಳಿವೆ. ಜಿಲ್ಲೆಯಲ್ಲಿ ತಿಂಗಳಿಗೆ ₹5 ಕೋಟಿ ಆಹಾರ ಪದಾರ್ಥ, ಮೊಟ್ಟೆ ವಿತರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಬರುತ್ತಿದೆ. ಆದರೆ, ಈ ಯೋಜನೆ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಸಮರ್ಪವಾಗಿ ಅನುಷ್ಠಾನಗೊಂಡಿಲ್ಲ ಎಂದರು.

ಆರೋಗ್ಯವಂತ‌ ಮಕ್ಕಳ ಸಂಖ್ಯೆ ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿದ್ದಾರೆ? ಇಲಾಖಾವಾರು ಪರಿಶೀಲನೆ ನಡೆಸಿದ್ದಾರೆ? ಪ್ರತಿ ತಿಂಗಳು ಐದು ₹೫ ಕೋಟಿಗೂ ಹೆಚ್ಚು ಹಣ ಬರುತ್ತಿದೆ. ಇದರ ಹಿಂದೆ ಅನೇಕ ಜನರ ಕೈವಾಡ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಕಾರ್ಯಕರ್ತರ ವಿಷಯದಲ್ಲಿ ತಮ್ಮ ಧೋರಣೆ ಬದಲಿಸದಿದ್ದರೆ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು. ವಿಜಯನಗರ ಜಿಲ್ಲೆ ನೋ ಮ್ಯಾನ್ಸ್‌ ಲ್ಯಾಂಡ್‌ ಅಲ್ಲ, ಇಲ್ಲಿ ಬುದ್ಧಿಜೀವಿಗಳು ಇದ್ದಾರೆ. ಸಾಹಿತಿಗಳು ಇದ್ದಾರೆ. ಹಿರಿಯ ರಾಜಕಾರಣಿಗಳು ಕೂಡ ಇದ್ದಾರೆ. ಎಲ್ಲವವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ ಎಂದರು.

ಸಚಿವ ಜಮೀರ್ ಅಹಮದ್ ಖಾನ್‌ ಅವರ ಬಳಿ ವಸತಿ ಹಾಗೂ ವಕ್ಫ್‌ ಖಾತೆಗಳು ಇವೆ. ಈ ಖಾತೆಗಳಲ್ಲೂ ಸಮರ್ಪಕ ಕೆಲಸ ಆಗುತ್ತಿಲ್ಲ. ಹೊಸಪೇಟೆಯಲ್ಲೇ 58 ಅಧಿಕೃತ ಸ್ಲಂಗಳಿವೆ. ಈ ಜನರ ಸಮಸ್ಯೆ ಆಲಿಸಿಲ್ಲ. ಈ ಹಿಂದೆ ಸ್ಲಂ ನಿವಾಸಿಗಳಿಗೆ ಪಟ್ಟಾ ನೀಡಲಾಗಿತ್ತು. ಈ ಬಗ್ಗೆ ನಾನೇ ಖುದ್ದು ಪ್ರಶ್ನೆ ಮಾಡಿದ್ದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿಲ್ಲ. ಸ್ಲಂಗಳಿಗೆ ಸಚಿವರು ಭೇಟಿ ನೀಡಿಲ್ಲ. ಚಾಮರಾಜಪೇಟೆಯಿಂದ ಬರೀ ಹಂಪಿ ಉತ್ಸವ, ಜನವರಿ ೨೬,, ಆ. ೧೫ರಂದು ಬಂದು ಹೋಗಲು ಉಸ್ತುವಾರಿ ಸಚಿವರನ್ನಾಗಿಸಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ಕೆಲಸ ಮಾಡಬೇಕು. ಸ್ಲಂ ಜನರ ಸಮಸ್ಯೆ ಆಲಿಸದಿದ್ದರೆ, ಸ್ಲಂ ಜನರ ಜತೆ ಧರಣಿ ಕೂರುವೆ. ವಕ್ಫ್‌ ಬೋರ್ಡ್‌ನಲ್ಲಿ ನೋಂದಣಿಯಾಗಿರುವ ಮಸೀದಿಗಳಿಗೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಸಮಿತಿ ರಚನೆ ಮಾಡಬೇಕು. ಆದರೆ, ಇದೂವರೆಗೆ ಈ ಕಾರ್ಯ ಆಗಿಲ್ಲ. ಸಮಸ್ಯೆ ಆಲಿಸುವ ಕೆಲಸವನ್ನು ಸಚಿವರು ಮಾಡುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಮಟ್ಕಾ, ಮರಳು, ಅನ್ನಭಾಗ್ಯ ಯೋಜನೆಯಲ್ಲೂ ಅವ್ಯವಹಾರ ಸೇರಿದಂತೆ ಹಲವು ಅವ್ಯವಹಾರಗಳು ನಡೆಯುತ್ತಿವೆ. ಇಲಾಖಾವಾರು ಅವ್ಯವಹಾರದ ಬಗ್ಗೆ ಮುಂದೆ ಮಾತನಾಡುವೆ. ಶಾಸಕ ಎಚ್.ಆರ್‌. ಗವಿಯಪ್ಪನವರ ಕುರಿತು ಕೂಡ ಶೀಘ್ರ ಮಾತನಾಡುವೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ. ಖಾಜಾಹುಸೇನ್‌, ಮುಖಂಡರಾದ ನಿಂಬಗಲ್‌ ರಾಮಕೃಷ್ಣ, ತಮನಳೇಪ್ಪ, ಮರಡಿ ಮಂಜುನಾಥ ಮತ್ತಿತರರಿದ್ದರು.

ಅಶ್ಲೀಲ ಪದ ಬಳಕೆ ಸಲ್ಲ: ಹಂಪಿ ಉತ್ಸವದಲ್ಲಿ ಸಚಿವ ಜಮೀರ್ ಅಹಮದ್‌ ಖಾನ್‌ ಅವರ ಪುತ್ರ ನಟ ಜೈದ್‌ ಖಾನ್‌ ನೀಡಿದ ಕಾರ್ಯಕ್ರಮದ ವೇಳೆ ನಟ ಸಾಧುಕೋಕಿಲ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಇದು ಹಂಪಿ ಉತ್ಸವಕ್ಕೆ ಕಪ್ಪುಚುಕ್ಕೆಯಾಗಿದೆ. ಇಂತಹ ಪದಗಳನ್ನು ಗಣ್ಯರ ಎದುರೇ ಬಳಕೆ ಮಾಡಿರುವುದು ಖಂಡಿತ ಸರಿಯಲ್ಲ. ಕೂಡಲೇ ಇದನ್ನು ಜಿಲ್ಲಾಡಳಿತ ಖಂಡಿಸಬೇಕಿತ್ತು ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ಹೇಳಿದರು.