ವಿಜಯನಗರ ರೈತರ ಅನುಕೂಲಕ್ಕಾಗಿ ಸಕ್ಕರೆ ಸ್ಥಾಪನೆ:ಸಚಿವ ರಾಜಣ್ಣ

| Published : Oct 07 2024, 01:36 AM IST

ವಿಜಯನಗರ ರೈತರ ಅನುಕೂಲಕ್ಕಾಗಿ ಸಕ್ಕರೆ ಸ್ಥಾಪನೆ:ಸಚಿವ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಕ್ಷೇತ್ರದಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲದಂತಾಗಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ರೈತರ ಬಹುದಿನದ ಬೇಡಿಕೆ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಅಥವಾ ಖಾಸಗಿ ಮಾಲೀಕತ್ವದಲ್ಲಿ ಶೀಘ್ರ ಸ್ಥಾಪನೆ ಮಾಡಲು ಸಿದ್ಧರಾಗಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ತಾಲೂಕಿನ ನಾಗೇನಹಳ್ಳಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಶಾಸಕ ಗವಿಯಪ್ಪನವರು ಈ ಹಿಂದೆ ಗಮನಕ್ಕೆ ತಂದಿದ್ದರು. ವಿಜಯನಗರ ಕ್ಷೇತ್ರದಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲದಂತಾಗಿದೆ. ಸಕ್ಕರೆ ಕಾರ್ಖಾನೆ ಆರಂಭದಿಂದ ಈ ಭಾಗದ ರೈತರು ಒಂದಿಷ್ಟು ಹಣ ನೋಡುತ್ತಾರೆ. ಇದರಿಂದ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆ ಚೇತರಿಕೆ ಕಾಣಲಿದೆ. ಹೇಗಾದರೂ ಮಾಡಿ ಕಾರ್ಖಾನೆ ಆರಂಭವಿಸಬೇಕೆಂದು ಹೇಳಿದ್ದಾರೆ. ನಾನು ಸಹ ಗವಿಯಪ್ಪ ಅವರಿಗೆ ಸಕ್ಕರೆ ಕಾರ್ಖಾನೆಯನ್ನು ನೀವೇ ಸ್ಥಾಪನೆ ಮಾಡಬಹುದಲ್ಲ ಎಂದು ಸಲಹೆ ನೀಡಿದ್ದೆ. ಇದೀಗ ಅದೇ ಚೆರ್ಚೆ ನಡೆದಿದ್ದು, ಶೀಘ್ರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ರೈತಪರ ಕಾಳಜಿ ಸರ್ಕಾರ:

ಕಾಂಗ್ರೆಸ್ ಸರ್ಕಾರ ರೈತರ ಪರ ಕಾಳಜಿ ಹೊಂದಿರುವ ಸರ್ಕಾರ. ಏನೂ ಇಲ್ಲದೇ ರೈತರ ಪರ ಡೋಂಗಿತನ ತೋರಿಸುವವರು ಇದ್ದಾರೆ. ಆದರೆ, ನಾವು ಶೂನ್ಯ ಬಡ್ಡಿ ಸಾಲ, ಸಾಲ ಮನ್ನಾ ಸೇರಿ ರೈತರಿಗೆ ನಾನಾ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.

ನೂರು ವರ್ಷದ ಸಂಭ್ರಮ:

ನಾಗೇನಹಳ್ಳಿ ಸಹಕಾರಿ ಸಂಘಕ್ಕೆ ೧೯೨೪ರಿಂದ ನೂರು ವರ್ಷ ತುಂಬಿದೆ. ಸಂಸ್ಥಾಪಕರಾದ ಅಯ್ಯನಗೌಡರು ಸಮಾಜಿಮುಖಿಯಾಗಿದ್ದರು ಅವರನ್ನು ನೆನೆಸಿಕೊಳ್ಳಬೇಕು. ಶತಮಾನೋತ್ಸವಕ್ಕೆ ಶಾಸಕರು ಬರಲೇಬೇಕೆಂದು ಒತ್ತಾಯಿಸಿ ಕರೆತಂದಿದ್ದಾರೆ. ಇಲ್ಲಿನ ಜನರ ಬಗ್ಗೆ ಬಹಳ ಪ್ರೀತಿ ಹೊಂದಿದ್ದಾರೆ. ಪ್ರಾರಂಭದಿಂದ ಈವರೆಗೆ ಸಂಸ್ಥೆಯ ಅಭಿವೃದ್ದಿಗೆ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಬೇಕು. ಈಗಿನವರು ಕೂಡ ಆಡಳಿತ ಮಂಡಳಿಯ ರೈತರ ಪರ ಉತ್ತಮ ಸೇವೆ ಸಲ್ಲಿಸಿದ ಕಾರಣ ಆರ್ಥಿಕವಾಗಿ ಗಟ್ಟಿಯಾಗಿ ಜನರ ವಿಶ್ವಾಸ ಗಳಿಸಿದೆ ಎಂದರು.

ರೈತರು ಆರ್ಥಿಕ ಸದೃಢರಾಗಬೇಕಿದೆ. ದೇಶದಲ್ಲಿ ತಾನು ತಾಯಾರು ಮಾಡಿದ ಪದಾರ್ಥಕ್ಕೆ ಬೆಲೆ ನಿಗದಿಪಡಿಸಬಹುದು. ಆದರೆ, ರೈತರ ಬೆಳೆಗೆ ಬೆಲೆ ನಿಗದಿಪಡಿಸುವ ಅವಕಾಶವಿಲ್ಲ. ರೈತರ ಉತ್ಪಾದನಗಳಿಗೆ ಕೊಳ್ಳುವವರು ಬೆಲೆ ನಿಗಸಿದಿತ್ತಾರೆ. ರೈತರೇ ಬೆಲೆ ನಿಗದಿಸುವರಗೆ ಆರ್ಥಿಕ ಸಂಕಷ್ಟದಲ್ಲಿ ಇರುತ್ತಾರೆ. ಬೆಲೆ ನಿಗದಿಸುವ ಆರ್ಥಿಕ ಶಕ್ತಿ ರೈತರಲ್ಲಿ ಬರಬೇಕು. ಗ್ರಾಮೀಣ ಭಾಗದ ರೈತರು ಆರ್ಥಿಕವಾಗಿ ಸದೃಢವಾಗಬೇಕು. ಫಸಲಿಗೆ ನ್ಯಾಯಯುತ ಬೆಲೆ ದೊರಕುವ ವ್ಯವಸ್ಥೆ ಮಾಡುವ ಅವಶ್ಯಕತೆ ಇದೆ. ಕುಟುಂಬದ ಸದಸ್ಯರ ಮೇಲೆ ಸಾಲದ ಹೊರೆ ಹೆಚ್ಚುತ್ತಿದೆ. ಕೃಷಿ ಲಾಭದಾಯವಾಗುವ ರೀತಿಯಲ್ಲಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.ಶತಮಾನೋತ್ಸವ ಕಂಡಿರುವ ಸಂಸ್ಥೆ ಇನ್ನೂ ಹಚ್ಚಿನ ಮಟ್ಟದಲ್ಲಿ ಬೆಳಯಲಿ. ಜಾತಿ ಮತ್ತು ಪಕ್ಷದ ವ್ಯವಸ್ಥೆಯಿಂದ ದೂರ ಇದ್ದು ಸಹಕಾರಿ ಆಂದೋಲನದಲ್ಲಿ ಕೆಲಸ ಮಾಡಬೇಕು. ಆಡಳಿತ ಮಂಡಳಿ ಜತೆಗೆ ಸಿಬ್ಬಂದಿಗಳು ಕೂಡ ಪ್ರಾಮಾಣಿಕತೆ-ದಕ್ಷತೆಯಿಂದ ಕೆಲಸ ಮಾಡಿದಾಗ ಮಾತ್ರ ರೈತರ ವಿಶ್ವಾಸ ಗಳಿಸಲು ಸಾಧ್ಯವಾಗಲಿದೆ. ಇದರಿಂದ ಸಂಘದ ಅಭಿವೃದ್ಧಿಯಾಗಲಿದೆ ಎಂದರು.

ಕೊಟ್ಟೂರು ಸಂಸ್ಥಾನಮಠದ ಕೊಟ್ಟೂರುಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಎಚ್.ಆರ್.ಗವಿಯಪ್ಪ, ಬಿಡಿಸಿಸಿ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿದರು.

ನಗರಗಡ್ಡಿ ಶಾಂತಲಿಂಗೇಶ್ವರ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ ಎಲ್.ಎನ್.ಗೌಡ ಪಾಟೀಲ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ರಮಣರೆಡ್ಡಿ, ಸಹಾಯಕ ಆಯುಕ್ತ ಎ.ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಎಂ., ತಾ.ಪಂ. ಇಒ ಲಕ್ಷ್ಮಿಕಾಂತ್, ದೀಪಕ್ ಸಿಂಗ್, ಬಿಡಿಸಿಸಿ ಆಡಳಿತ ಮಂಡಳಿ ನಿರ್ದೇಶಕರಾದ ಚೊಕ್ಕಬಸವನಗೌಡ, ಟಿ.ಎಂ.ಚಂದ್ರಶೇಖರಯ್ಯ, ಎಲ್.ಎಸ್.ಆನಂದ್, ನಾಗಮಣಿ ಜಿಂಕಲ್, ಗ್ರಾ.ಪಂ.ಅಧ್ಯಕ್ಷ ದುರುಗಪ್ಪ, ದೇವರಮನಿ ಜಂಬಣ್ಣ, ಸಂಘದ ಅಧ್ಯಕ್ಷ ಸಿ.ಆಶ್ಯಾಂ, ನಿರ್ದೇಶಕ ಕೆ.ಅಲ್ಲಾಭಕ್ಷಿ ಇದ್ದರು.