ಸಾರಾಂಶ
ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದ ರುದ್ರಾಕ್ಷಿ ಮಠದಲ್ಲಿ ಆರಂಭವಾದ ದೇವಿ ಪುರಾಣ ಕಾರ್ಯಕ್ರಮಕ್ಕೆ ಮರಿಯಮ್ಮನ ಹಳ್ಳಿಯ ಶ್ರೀ ಚಾಲಾನೆ ನೀಡಿದರು.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ಪುರಾಣ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ಮರಿಯಮ್ಮನ ಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ರಾಂಪುರ ಗ್ರಾಮದ ರುದ್ರಾಕ್ಷಿ ಮಠದಲ್ಲಿ ಆರಂಭವಾದ ದೇವಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಅನುಸಾರವಾಗಿ ಹುಟ್ಟಿಕೊಂಡಿರುವ ಎಲ್ಲ ಜಾತಿಗಳು ಧರ್ಮ ಬೋಧನೆ ನಡೆಸುತ್ತಿವೆ. ವಿವಿಧ ಧರ್ಮಗಳು ನಾಡಿನಲ್ಲಿದ್ದರೂ ಕೊನೆಗೆ ಐಕ್ಯಸ್ಥಾನ ಮಾತ್ರ ಒಂದೇ ಆಗಿದೆ ಎಂದರು.ನೊಂದ ಜೀವಗಳನ್ನು ಹಸನು ಮಾಡುವ ಶಕ್ತಿಯುಳ್ಳ ನಮ್ಮ ಸಂಸ್ಕೃತಿ ಅರ್ಥೈಸಿ ಕೊಳ್ಳಲು ವಿದೇಶಿಗರು ಒಲವು ತೋರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಧರ್ಮದ ಜಾಗೃತಿ, ಮೌಲ್ಯ ಉಳಿಸಿ ಬೆಳೆಸಿಕೊಂಡು, ಬದುಕಿಗೆ ಅರ್ಥ ತಂದುಕೊಡುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ ಎಂದು ಕರೆ ನೀಡಿದರು.
ರುದ್ರಾಕ್ಷಿ ಮಠದ ಧರ್ಮದರ್ಶಿ ಡಾ.ಬಿ.ವೀರಭದ್ರಯ್ಯ ಸ್ವಾಮೀಜಿ ಮಾತನಾಡಿ, ಎಲ್ಲರ ಸಹಕಾರದಿಂದ ಸುಮಾರು 50 ವರ್ಷದಿಂದ ದೇವಿ ಪುರಾಣ ಕಾರ್ಯಕ್ರಮವನ್ನೂ ನಡೆಸಿಕೊಂಡು ಬರುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಆಯೋಜನೆ ಆಗಬೇಕು. ಈಗಿನ ಯುವ ಪೀಳಿಗೆಗೆ ಪುರಾಣ ಪುಣ್ಯ ಕತೆಗಳನ್ನು ತಿಳಿಸುವ ಅಗತ್ಯ ಇದೆ ಎಂದು ನುಡಿದರು.ಇದೆ ವೇಳೆ ಗುರುಪ್ರಸಾದ್ ದೇವಿ ಮಹಾತ್ಮೆಯ ಪ್ರವಚನ ಮಾಡಿದರು, ಮಠದ ರೇಣುಕಾ ಸ್ವಾಮಿ, ಜಗನ್ನಾಥ ಹಿರೇಮಠ, ಡಿಕೆಅರ್ ಗ್ರೂಪ್ ನ ಮಾಲೀಕರಾದ ಎಂ.ಡಿ ಮಂಜುನಾಥ, ಗಂಗಣ್ಣ, ಶಂಕರಯ್ಯ, ಪ್ರಶಾಂತ್ ಇದ್ದರು.