ಕನ್ನಡಪ್ರಭ ವಾರ್ತೆ ಮಂಡ್ಯ

ನಾಲಾ ಆಶ್ರಿತ ಪ್ರದೇಶದಲ್ಲಿರುವ ಕಬ್ಬು ಬೆಳೆ ಒಣಗಿ ಉರುವಲಾಗಿದೆ. ಗದ್ದೆಯಲ್ಲೇ ಒಣಗುತ್ತಿರುವ ಕಬ್ಬನ್ನು ಕಂಡು ರೈತರು ಗೋಳಿಡುತ್ತಿದ್ದಾರೆ. ಲಕ್ಷಾಂತರ ರು. ಹಣ ಸಾಲ ಮಾಡಿ ಕಬ್ಬು ಬೆಳೆದಿದ್ದೇವೆ. ಇದೀಗ ನೀರು ಸಿಗದಿದ್ದರೆ ನಮಗೆ ಸಾವೇ ಗತಿ ಎಂದು ಅನ್ನದಾತರು ಗೋಳಿಡುತ್ತಿದ್ದಾರೆ.

ತಾಲೂಕಿನ ಮಂಗಲ, ಹನಿಯಂಬಾಡಿ, ಸಂತೆಕಸಲಗೆರೆ, ಕೊತ್ತತ್ತಿ, ಮೊತ್ತಹಳ್ಳಿ ಸುತ್ತಮುತ್ತ ಸಂಚರಿಸಿದರೆ ಎಲ್ಲೆಲ್ಲೂ ಒಣಗಿದ ಕಬ್ಬಿನ ದರ್ಶನವಾಗುತ್ತದೆ. ಹಲವೆಡೆ ಕಬ್ಬು ಗದ್ದೆಯಲ್ಲೇ ಒಣಗಿ ಬೆಂಡಾಗಿದ್ದರೆ, ಮತ್ತೆ ಹಲವೆಡೆ ಉರುವಲಾಗಿದೆ. ಆ ಕಬ್ಬನ್ನು ಕಡಿದು ಸಾಗಿಸುವುದಕ್ಕಿಂತ ಬೆಂಕಿ ಹಚ್ಚುವುದೇ ಮೇಲು ಎಂಬ ಸ್ಥಿತಿಗೆ ತಲುಪಿದೆ.

ಜೂನ್ ತಿಂಗಳಲ್ಲೇ ಬೆಳೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದರೆ ರೈತರು ಬೆಳೆ ನಷ್ಟದಿಂದ ಪಾರಾಗುತ್ತಿದ್ದರು. ಆಗ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿತ್ತು. ಸರ್ಕಾರ ಸಕಾಲದಲ್ಲಿ ನೀರು ಹರಿಸುವ ತೀರ್ಮಾನ ಕೈಗೊಳ್ಳದೆ ಕಬ್ಬು ಬೆಳೆ ನಷ್ಟಕ್ಕೆ ನೇರ ಹೊಣೆಯಾಗಿದೆ. ಜಿಲ್ಲೆಯವರೇ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ರೈತರ ಮನವಿಗೆ ಸ್ಪಂದಿಸಲೇ ಇಲ್ಲ. ಜನಪ್ರತಿನಿಧಿಗಳೂ ಕೂಡ ಬೆಳೆಗಳ ಪರಿಸ್ಥಿತಿಯನ್ನು ಅವಲೋಕಿಸುವ, ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಪ್ರದರ್ಶಿಸಲೇ ಇಲ್ಲ.

ಕೆರೆಗಳನ್ನು ತುಂಬಿಸಿದ್ದರೆ ಅದರಿಂದ ನೀರು ಪಡೆದು ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿತ್ತು. ಕೆರೆಗಳನ್ನೂ ತುಂಬಿಸಲಿಲ್ಲ. ನಾಲೆಯಲ್ಲಿ ನೀರನ್ನೂ ಹರಿಸುತ್ತಿಲ್ಲ. ಅಣೆಕಟ್ಟೆಯಲ್ಲಿ ನೀರಿದ್ದರೂ ಬೆಳೆಗಳ ರಕ್ಷಣೆಗೆ ಕೊಡುತ್ತಿಲ್ಲವೆಂದಾದರೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದಾದರೂ ಹೇಗೆ. ಈಗ ನಮಗೆ ನೀರು ಕೊಡಲಿಲ್ಲವೆಂದರೆ ನಮಗೆ ಸಾವೇ ಗತಿ ಎಂದು ನೊಂದು ನುಡಿದರು.


ವಿಶ್ವೇಶ್ವರಯ್ಯ ನಾಲೆಯ ೧೨ನೇ ಸೀಳುನಾಲೆಗೆ ನೀರು ಹರಿಸಿದರೆ ಮಂಗಲ, ಹನಿಯಂಬಾಡಿ, ಸಂತೆಕಸಲಗೆರೆ, ಕೊತ್ತತ್ತಿ, ಮೊತ್ತಹಳ್ಳಿ ಕೆರೆಗಳು ತುಂಬುತ್ತಿದ್ದವು. ಜೊತೆಗೆ ಬೆಳೆಗಳಿಗೂ ನೀರಿನ ಆಸರೆ ದೊರಕುತ್ತಿತ್ತು. ಆ ಕೆಲಸವನ್ನು ಯಾರೊಬ್ಬರೂ ಮಾಡಲಿಲ್ಲವಾದ್ದರಿಂದ ಬೆಳೆಯನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದೇವೆ ಎಂದು ರೈತರಾದ ಕೆಂಪರಾಜು, ಟಿ.ಕೆಂಪೇಗೌಡ, ಪುಟ್ಟಸ್ವಾಮಿ, ಜಯರಾಮು, ಸಿದ್ದೇಗೌಡ ನೊಂದು ನುಡಿದರು.