ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನೂತನ ನವೀಕರಣದೊಂದಿಗೆ ಎ ೧ ಸ್ಪೋರ್ಟ್ಸ ಅಕಾಡೆಮಿ ಹಾಗೂ ಇನ್ಸಿಟ್ಯೂಷನ್ ಮತ್ತು ಬೇಸಿಗೆ ಶಿಬಿರಕ್ಕೆ ಶಾಸಕ ಸಿ. ಎನ್. ಬಾಲಕೃಷ್ಣ ಚಾಲನೆ ನೀಡಿದರು.ಪಟ್ಟಣದ ನವೋದಯ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿ ನವೀಕರಣಗೊಳಿಸಿರುವ ಅಕಾಡೆಮಿಯಲ್ಲಿ ಮಾತನಾಡಿ ಅವರು ಮಕ್ಕಳ ಕ್ರೀಡಾ ಪ್ರೋತ್ಸಾಹದ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಉತ್ತಮ ತರಬೇತಿಯೊಂದಿಗೆ ಕ್ರಿಕೆಟ್ ಜಗತ್ತಿಗೆ ಪರಿಚಯಿಸುವುದು ಎ೧ಅಕಾಡೆಮಿಯ ಮುಖ್ಯ ಉದ್ದೇಶವಾಗಿದೆ, ಈ ಶಿಬಿರವನ್ನು ತಾಲ್ಲೂಕಿನ ಕ್ರೀಡಾಸಕ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಕ್ರಿಕೆಟ್ ತರಬೇತಿದಾರ ರಂಗನಾಥ್ ಮಾತನಾಡಿ ಬೇಸಿಗೆಯ ರಜೆ ಹಿನ್ನೆಲೆ ೨ ತಿಂಗಳು ಕಾಲ ಬೇಸಿಗೆ ಶಿಬಿರ ಆಯೋಜಿಸಿದ್ದು ಬೆಳಗ್ಗೆ ೬.೩೦ ರಿಂದ ೯ ಗಂಟೆ ಹಾಗೂ ಸಂಜೆ ೪ ಗಂಟೆಯಿಂದ ೬.೩೦ ವರೆಗೆ ಕ್ರಿಕೆಟ್ ತರಬೇತಿ ನೀಡಲಾಗುತ್ತದೆ. ಮೈಸೂರು ಹಾಗೂ ಬೆಂಗಳೂರಿನ ನುರಿತ ಮತ್ತು ಅನುಭವಿ ತರಬೇತುದಾರರು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಸಿ. ವೈ. ಸತ್ಯನಾರಾಯಣ, ರವೀಶ್, ಸಬ್ ರಿಜಿಸ್ಟರ್ ದೇವರಾಜ್, ಆರೋಗ್ಯ ನಿರೀಕ್ಷಕರಾದ ರಾಜು, ನವೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆಂಬಾಳ್ ಶರತ್, ತೇಜಸ್, ಕನ್ನಡ ವಾಸು ಸೇರಿದಂತೆ ಇತರರು ಹಾಜರಿದ್ದರು.