ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ, ಟಿವಿ ಮತ್ತು ಮೊಬೈಲ್ ಫೋನ್‍ಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಸಮಯ ಹಾಗೂ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸಿನ ಉಲ್ಲಾಸಕ್ಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಅತ್ಯಂತ ಪೂರಕವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಹೇಳಿದರು.ಜಿಲ್ಲಾ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 15 ದಿನಗಳ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬಾಲಭವನದಲ್ಲಿ ಶಾಲಾ ಪಠ್ಯದ ಒತ್ತಡವಿರುವುದಿಲ್ಲ. ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಕೆಗೆ ಅವಕಾಶ ನೀಡಲಾಗುತ್ತದೆ. ಮಕ್ಕಳು ತಮ್ಮ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಂಡು, ಸೃಜನಶೀಲರಾಗಿ ಬೆಳೆಯಲು ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸಾಹಸ ಕ್ರೀಡಾಪಟು ಜ್ಯೋತಿರಾಜ್ ಮಾತನಾಡಿ, ನಮ್ಮ ಬಾಲ್ಯದಲ್ಲಿ ಇಂತಹ ಸೌಲಭ್ಯಗಳು ಇರಲಿಲ್ಲ. ಈಗ ಸರ್ಕಾರ ಮತ್ತು ಇಲಾಖೆಗಳು ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡುತ್ತಿವೆ. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಆಶಿಸಿದರು.ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಆತ್ಮವಿಶ್ವಾಸ ವೃದ್ಧಿ, ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಹಾಗೂ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಈ ಶಿಬಿರದ ಮುಖ್ಯ ಉದ್ದೇಶ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಮಾತನಾಡಿ, ಮಕ್ಕಳ ಮನಸ್ಸಿಗೆ ಸ್ಫೂರ್ತಿ ನೀಡುವಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಜನಪದ ರಂಗ ಕಲಾವಿದ ಹಾಗೂ ಜೂನಿಯರ್ ಅಂಬರೀಶ್ ಖ್ಯಾತಿಯ ಸುರೇಶ್ ಅವರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮಕ್ಕಳನ್ನು ರಂಜಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರಾಜ ನಾಯ್ಕ್ ನವೀನ್ ಕುಮಾರ್, ನಿರ್ಮಲ, ಜಿಲ್ಲಾ ಬಾಲಭವನ ವ್ಯವಸ್ಥಾಪಕ ಸುರೇಶ್, ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ಹಾಗೂ ಸಂಪನ್ಮೂಲ ಶಿಕ್ಷಕರಾದ ಕುಮಾರಸ್ವಾಮಿ, ತಿಪ್ಪೇರುದ್ರಪ್ಪ, ಮಂಜುಳಾ ಮತ್ತು ಚಂದನ ಉಪಸ್ಥಿತರಿದ್ದರು.