ಎಲ್ಲ ಸಿದ್ಧತೆ ಪೂರ್ಣ । ಒಟ್ಟು 3229 ವಿದ್ಯಾರ್ಥಿಗಳು ಪರೀಕ್ಷೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರದ ಎಂಟು ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಎರಡು ದಿನ ನಡೆಯುವ ಸಿಇಟಿ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 3229 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏ.23 ಮತ್ತು 24 ರಂದು ನಡೆಯಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ನಡೆಸುವ ಈ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷೆಯಲ್ಲಿ ಸಭೆ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಎಂಟು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.


ಗುರುವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಶುಕ್ರವಾರ ಗಣತಿ ಮತ್ತು ಜೀವಶಾಸ್ತ್ರದ ಪರೀಕ್ಷೆಗಳು ನಡೆಯಲಿವೆ. ಎರಡು ದಿನ ಬೆಳಗಿನ ಪರೀಕ್ಷೆ 10.30ರಿಂದ 11.50ರ ವರೆಗೆ, ಮಧ್ಯಾಹ್ನ ಪರೀಕ್ಷೆ 2.30 ರಿಂದ 3.50ರ ವರೆಗೆ ನಡೆಯಲಿದೆ.

ಪೇಸ್‌ ಡಿಟೆಕ್ಟರ್‌ ವ್ಯವಸ್ಥೆ

ಪರೀಕ್ಷೆ ನಡೆಯುವ ಎಂಟು ಪರೀಕ್ಷಾ ಕೇಂದ್ರದಲ್ಲಿ ಪೇಸ್‌ ಡಿಟೆಕ್ಟರ್‌ ಅಳವಡಿಕೆ ಮಾಡಿಕೊಂಡು ತಪಾಸಣೆ ನಡೆಸಲಾಗುತ್ತದೆ. ವಿದ್ಯಾರ್ಥಿ ಮುಖ ಚಹರೆ ಹಾಗೂ ಪ್ರವೇಶ ಪತ್ರದಲ್ಲಿ ಇರುವ ಕ್ಯೂಆರ್ ಕೋಡ್ ಹೊಂದಾಣಿಕೆ ಆಗಬೇಕು. ಅದಕ್ಕಾಗಿ ತಲಾ 100 ವಿದ್ಯಾರ್ಥಿಗಳಂತೆ ಒಬ್ಬ ತಪಾಸಣೆಗೆ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಪೇಸ್‌ ಡಿಟೆಕ್ಟರ್ ನಿರ್ವಹಣೆ ಮಾಡುವುದಕ್ಕೆ ಜಿಲ್ಲಾ ಪಾಲಿಟೆಕ್ನಿಕ್‌ ಕಾಲೇಜಿನ ಎಂಟು ಮಂದಿ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಯಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ.2 ಗಂಟೆ ಮೊದಲು ಹಾಜರಿರಬೇಕು

ಪೇಸ್‌ ಡಿಟೆಕ್ಟರ್‌ ಪರಿಶೀಲನೆ, ವಸ್ತ್ರ ಸಂಹಿತೆ ಪರಿಶೀಲನೆ ಸೇರಿದಂತೆ ಮೊದಲಾದ ತಪಾಸಣೆ ಇರುವುದರಿಂದ ಪರೀಕ್ಷಾರ್ಥಿ ಗಳು ಪರೀಕ್ಷೆ ಆರಂಭಕ್ಕೂ ಕನಿಷ್ಠ ಎರಡು ತಾಸು ಮೊದಲೇ ಪರೀಕ್ಷಾ ಕೇಂದ್ರದ ಬಳಿ ಇರಬೇಕು ಎಂದು ಸಲಹೆ ನೀಡಲಾಗಿದೆ.

ಸಿಸಿ ಕ್ಯಾಮರಾ, ಜಾಮರ್ ಅಳವಡಿಕೆನಗರದ ಎಂಟು ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಪ್ರತಿ ಕೊಠಡಿ ಮತ್ತು ಕಾರಿಡಾರ್‌ನಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮಂಗಳಸೂತ್ರ ಹೊರತುಪಡಿಸಿ ಬೇರಾವುದೇ ಆಭರಣಗಳಿಗೆ ಅನುಮತಿಸುವುದಿಲ್ಲ. ಇನ್ನು ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಒಬ್ಬ ವಸ್ತ್ರ ಸಂಹಿತೆ ಅಧಿಕಾರಿ ನೇಮಕ

ಅನಗತ್ಯ ಗೊಂದಲ ತಪ್ಪಿಸಲು ಇದೇ ಮೊದಲ ಬಾರಿ ಪ್ರತಿ ಕೇಂದ್ರಕ್ಕೆ ಒಬ್ಬ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ. ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿ ಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ,ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇಲ್ಲ. ಶೂ ಕೂಡ ನಿಷೇಧಿಸಲಾಗಿದೆ.

---ಬಾಕ್ಸ್‌---

ಪರೀಕ್ಷಾ ಕೇಂದ್ರದ ವಿವರ

ಪರೀಕ್ಷಾ ಕೇಂದ್ರವಿದ್ಯಾರ್ಥಿ ಸಂಖ್ಯೆ

ಎಸ್‌ಟಿಜೆ ಮಹಿಳಾ ಪಿಯು ಕಾಲೇಜು360

ಸರ್ಕಾರಿ ಪಿಯು ಕಾಲೇಜು696

ಎಂಇಎಸ್‌ ಎಸ್‌ಎಸ್‌ಎಂ ಪಿಯು ಕಾಲೇಜು528

ಎಲ್‌ಬಿಎಸ್‌ ಸರ್ಕಾರಿ ಪಿಯು ಕಾಲೇಜಿ240

ಮೌಂಟೆನ್‌ ವಿವ್‌ ಪಿಯು ಕಾಲೇಜು360

ಟಿಎಂಎಸ್‌ ಪಿಯು ಕಾಲೇಜು288

ಸರ್ಕಾರಿ ಪಿಯು ಕಾಲೇಜು (ಬಾಲಕಿಯರ)445

ಸೆಂಟ್‌ ಜಾನ್ಸ್‌ ಬಾಲಕಿಯರ ಪಿಯು ಕಾಲೇಜು312

ಒಟ್ಟು 3,229