ಡಿ.ಕೆ.ಶಿವಕುಮಾರ್‌ ಬಗ್ಗೆ BJP ಸುನಿಲ್‌ ಕುಮಾರ್‌ ಅನುಕಂಪ!

| N/A | Published : Oct 04 2025, 01:00 AM IST / Updated: Oct 04 2025, 12:49 PM IST

Sunil kumar
ಡಿ.ಕೆ.ಶಿವಕುಮಾರ್‌ ಬಗ್ಗೆ BJP ಸುನಿಲ್‌ ಕುಮಾರ್‌ ಅನುಕಂಪ!
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಎರಡು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪುನಃ ಹೇಳಿದ್ದಾರೆ, ಆದ್ದರಿಂದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪ ಉಂಟಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ವಿ.ಕುಮಾರ್ ಹೇಳಿದ್ದಾರೆ.

ಉಡುಪಿ: ಮುಂದಿನ ಎರಡು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪುನಃ ಹೇಳಿದ್ದಾರೆ, ಆದ್ದರಿಂದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪ ಉಂಟಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ವಿ.ಕುಮಾರ್ ಹೇಳಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೊಮ್ಮ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರವನ್ನು ಕಾಲಿನಿಂದ ಒದ್ದು ತೆಗೆದುಕೊಳ್ಳುತ್ತೇನೆ ಎಂದವರು ಹೇಳಿದ ಮಾತು ನೆನಪಿದೆ, ಆದ್ದರಿಂದ ಅವರು ಸಹಜವಾಗಿ ಸಿಎಂ ಅಧಿಕಾರ ಪಡೆಯುತ್ತಾರೋ ಅಥವಾ ಅವರ ಸಹಜ ಗುಣದಂತೆ ಕಾಲಿನಿಂದ ಒದ್ದು ಪಡೆಯುತ್ತಾರೋ ಎಂಬ ಬಗ್ಗೆ ಜನತೆಗೆ ಕುತೂಹಲ ಇದೆ ಎಂದರು.

ಸರ್ಕಾರದಲ್ಲಾಗುತ್ತಿರುವ ಈ ಕ್ರಾಂತಿ, ಈ ಕಂಪನ ಕಾಂಗ್ರೆಸ್ ನ ಒಳಗೆ ಆಗಲಿ, ಆದರೆ ಅದರಿಂದ ರಾಜ್ಯದ ಜನತೆಗೆ ಕಂಪನ, ತೊಂದರೆ ಆಗದಿರಲಿ ಎಂದವರು ಹಾರೈಸಿದರು.

ಪುಷ್ಪಾರ್ಚನೆ ಬಿಜೆಪಿ ಮಾಡುತ್ತದೆ!

ಮುಂದಿನ ಎರಡು ದಸರಗಳಲ್ಲಿಯೂ ನಾನೇ ನಾಡದೇವಿಗೆ ಪುಷ್ಪಾರ್ಚನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತಿದ್ದಾರೆ. ಆದರೆ ಮುಂದಿನ ವರ್ಷ ನಾವೇ ಪುಷ್ಪಾರ್ಚನೆ ಮಾಡಬೇಕು, ಅದಕ್ಕೆ ಈ ಸರ್ಕಾರ ಶೀಘ್ರವಾಗಿ ಪತನವಾಗಬೇಕು, ನಾವು ಮುಂದಿನ ಚುನಾವಣೆಗೆ ಹೋಗಬೇಕು ಎನ್ನುವ ನಿರೀಕ್ಷೆ ಬಿಜೆಪಿ ಇಟ್ಟುಕೊಂಡಿದೆ, ಬಿಜೆಪಿ ಚುನಾವಣೆಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಂತ ಸರ್ಕಾರದಲ್ಲಾಗುತ್ತಿರುವ ಕಂಪನದಲ್ಲಿ ಬಿಜೆಪಿ ಪಾತ್ರವಿಲ್ಲ ಎಂದರು.

ಗುಂಡಿ ಮುಚ್ಚಲು ಬಿಜೆಪಿ ಬರಬೇಕು?

ರಾಜ್ಯದಲ್ಲಿರುವುದು 80 ಪರ್ಸೆಂಟ್ ಸರ್ಕಾರ, ಆದ್ದರಿಂದ ರಾಜ್ಯ ರಸ್ತೆಗಳಲ್ಲೆಲ್ಲಾ ಗುಂಡಿಗಳು ಬಿದ್ದಿವೆ, ‘ಸಾವಿಲ್ಲದ ಮನೆಯಿಂದ ಸಾಸಿವೆ ತಾ’ ಎನ್ನುವಂತೆ ಇವತ್ತು ರಾಜ್ಯದಲ್ಲಿ ಗುಂಡಿ ಇಲ್ಲದ ರಸ್ತೆ ತೋರಿಸಿ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ನಾವು ಶಾಸಕರು ಹೊಸ ರಸ್ತೆ ನಿರ್ಮಾಣ ಕೇಳುತ್ತಾನೇ ಇಲ್ಲ, ಯಾಕೆಂದರೆ ಹೊಸ ರಸ್ತೆ ನಿರ್ಮಾಣ ಕನಸಿನ ಮಾತು, ಇರುವ ರಸ್ತೆಗಳ ಗುಂಡಿ ಮುಚ್ಚಿಸಲು ಆಗುತ್ತಿಲ್ಲ, ಮುಂದೆ ಬಿಜೆಪಿ ಸರ್ಕಾರ ಬಂದ ಮೇಲೆ ಗುಂಡಿ ಮುಚ್ಚಬೇಕೋ ಏನೋ ಎಂದವರು ಸಂಶಯ ವ್ಯಕ್ತಪಡಿಸಿದರು.

ಮೊನ್ನೆ ದಸರಾದಲ್ಲಿ ಮುಖ್ಯಮಂತ್ರಿ ಎರಡೆರಡು ಬಾರಿ ಪ್ರಯತ್ನಿಸಿದರೂ ಅವರ ಕೈಯಿಂದ ತೆಂಗಿನಕಾಯಿ ಒಡೆಯಲಿಲ್ಲ, ಯಾಕೆಂದರೆ ಈ ಸರ್ಕಾರಕ್ಕೆ ಭಗವಂತನ ಕೃಪೆಯೇ ಇಲ್ಲ ಎನ್ನುವ ಶಕುನ ಅದು ಎಂದ ಸುನಿಲ್ ಕುಮಾರ್ ವಿಶ್ಲೇಷಿಸಿದರು.

ದೇಶವಿರೋಧಿ-ರಾಹುಲ್ ಸಂಸ್ಕಾರ

ಕೊಲಂಬಿಯಾದಲ್ಲಿ ರಾಹುಲ್ ಗಾಂಧಿ ದೇಶದ ವಿರುದ್ಧ ಮತ್ತೆ ಮಾತನಾಡಿದ್ದಾರೆ, ಅದು ಅವರಿಗೆ ಕುಟುಂಬದಲ್ಲಿ ಸಿಕ್ಕಿದ ಸಂಸ್ಕಾರ, ಯಾಕೆಂದರೆ ಈ ಗಾಂಧಿ ಕುಟುಂಬ ಯಾವತ್ತೂ ಈ ದೇಶಕ್ಕೆ ನಿಷ್ಟವಾಗಿರಲಿಲ್ಲ ಎಂದು ಸುನಿಲ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಅವರ ಈ ನಡವಳಿಕೆ ಅವರನ್ನು ಉತ್ತಮ ನಾಯಕನನ್ನಾಗಿ ರೂಪಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Read more Articles on