ಸಾರಾಂಶ
ಏಳು ದಿನಗಳ ಕಾಲ ಉಪವಾಸ ವ್ರತ ಆಚರಿಸುವ ಧಾರವಾರ ಮೂಲದ ನವೀನ್ ಬಡಿಗೇರ್ ಕಾರ್ಣಿಕ ನುಡಿದರು.
ಕುರುಗೋಡು: ತಾಲೂಕಿನ ಯರಿಂಗಳಿಗಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಗುರುವಾರ ಜರುಗಿದ ಕಾರ್ಣಿಕೋತ್ಸವದಲ್ಲಿ ನವೀನ್ ಬಡಿಗೇರ್ ‘ಮಳೆ ಅಂದ ಅಂದ ಅಂದ ಬೆಳೆ ಚಂದ ಚಂದ ಚಂದಾದೀತಲೇ ಪರಾಕ್’ ಎಂದು ಭವಿಷ್ಯವಾಣಿ ನುಡಿದರು.
ಏಳು ದಿನಗಳ ಕಾಲ ಉಪವಾಸ ವ್ರತ ಆಚರಿಸುವ ಧಾರವಾರ ಮೂಲದ ನವೀನ್ ಬಡಿಗೇರ್ ಕಾರ್ಣಿಕ ನುಡಿದರು.ಈ ಬಾರಿ ಉತ್ತಮ ಮಳೆ ಬೆಳೆಯಾಗುತ್ತದೆ ಎಂದು ಕಾರ್ಣಿಕದ ಭವಿಷ್ಯದ ನುಡಿಯನ್ನು ರೈತರು ವ್ಯಾಖ್ಯಾನಿಸಿದರು. ಯರಿಂಗಳಿಗಿ ಗ್ರಾಮವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು.
ಬುಧವಾರ ದೇವಸ್ಥಾನದಲ್ಲಿ ಸರಪಳಿ ಸೇವೆ ಜರುಗಿತು. ನವೀನ್ ಬಡಿಗೇರ್, ವಿಠ್ಠೋಬಪ್ಪ, ಕಾರ್ತಿಕ್ ಮತ್ತು ರಾಜು ಸ್ವಾಮಿ ಇವರು ಕಬ್ಬಿಣದ ಸರಪಳಿ ಎಳೆದು ತುಂಡುಮಾಡುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು.ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಳಪ್ಪ ಆಚಾರಿ ಎನ್ನುವವರು ಪ್ರಾರಂಭದಿಂದ ಸರಪಳಿ ಪವಾಡ ಮತ್ತು ಕಾರ್ಣಿಕ ನುಡಿಯುತ್ತಿದ್ದರು. ಅವರು ಲಿಂಗೈಕ್ಯರಾದ ನಂತರ ಅವರ ಮಗ ನವೀನ್ ಬಡಿಗೇರ್ ಏಳು ವರ್ಷಗಳಿಂದ ಕಾರಣಿಕ ನುಡಿಯುತ್ತಿದ್ದಾರೆ.
ಕಾರ್ಣಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿನೀಡಿ ಮೈಲಾರ ಲಿಂಗೇಶ್ವರ ಸ್ವಾಮಿಯ ದರ್ಶನಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.ಕುರುಗೋಡು ತಾಲೂಕಿನ ಯರಿಂಗಳಿಗಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ನವೀನ್ ಬಡಿಗೇರ್ ಕಾರ್ಣಿಕ ನುಡಿದರು