ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
7ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ವತಿಯಿಂದ 2ನೇ ವರ್ಷದ ಕೃಷ್ಣ ರಾಧೆ ಛದ್ಮವೇಷ ಸ್ಪರ್ಧೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶನಿವಾರ ದೇವಾಲಯದ ಆವರಣದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಮತ್ತು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಉದ್ಘಾಟಿಸಿ ಶುಭಕೋರಿದರು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ವೇದಿಕೆ ಕಲ್ಪಿಸಿದ ಸಮಿತಿ ಸದಸ್ಯರಿಗೆ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ 28 ಮಕ್ಕಳು ಪಾಲ್ಗೊಂಡಿದ್ದು, ಮೊದಲ 3 ಸ್ಥಾನಗಳನ್ನು ಕ್ರಮವಾಗಿ ಆದ್ವಿಕ್, ಚರಿಸ್ಮಾ ಎಂ.ಎಚ್., ಮತ್ತು ಶ್ರೀನ್ಯ ಪಡೆದರು.5 ವರ್ಷ ಮೇಲ್ಪಟ್ಟ ಮಕ್ಕಳ ಸ್ಪರ್ಧೆಯಲ್ಲಿ 25 ಮಕ್ಕಳು ಪಾಲ್ಗೊಂಡಿದ್ದು ಮೊದಲ 3 ಸ್ಥಾನಗಳನ್ನು ವಿಸ್ಮಿತ ಶೇಖರ್, ವಿನಯ ಪ್ರಶಾಂತ್ ಮತ್ತು ಅಮರನಾಥ್ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಬಹುಮಾನಗಳಾಗಿ ಶ್ರೀಕೃಷ್ಣ ಚರಿತ್ರೆ ಪುಸ್ತಕವನ್ನು ವಿತರಿಸಿದರು.ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಪತ್ರಕರ್ತರಾದ ಕೆ.ತಿಮ್ಮಪ್ಪ, ಬಿ.ಸಿ.ದಿನೇಶ್ ಹಾಗೂ ನೃತ್ಯ ಕಲಾವಿದ ಶಾನು ಮತ್ತು ರಮ್ಯ ದಿನೇಶ್ ಕಾರ್ಯನಿರ್ವಹಿಸಿದರು.ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ನೂರಾರು ಸುತ್ತ ಮುತ್ತಲಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ದೇವಾಲಯ ಸಮಿತಿ ದಾಸಂಡ ರಮೇಶ್ ಚಂಗಪ್ಪ, ಕಾರ್ಯದರ್ಶಿ ಶಿವಪ್ಪ, ಸಮಿತಿ ಸದಸ್ಯರಾದ ರುಕ್ಮಯ್ಯ ರಾಮಚಂದ್ರ ಕಿರಣ್ ಡಿ.ಎಂ., ಉಣಿಪ್ರಕಾಶ್, ದಾಸಂಡ ಜಗದೀಶ್, ದಾಸಂಡ ರಂಜನ್ ಮತ್ತಿತರರು ಯಶಸ್ವಿಯಾಗಿ ಮುನ್ನಡೆಸಿದರು.