ಅಂಗನವಾಡಿ ಕೇಂದ್ರಗಳಲ್ಲಿ ಸಿಗುವ ಶಿಕ್ಷಣ ಪ್ರಮುಖ: ಎ. ಎಸ್. ಪೊನ್ನಣ್ಣ

| Published : Aug 21 2025, 02:00 AM IST

ಸಾರಾಂಶ

ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣ ಪ್ರಮುಖವಾದುದು ಎಂದು ಶಾಸಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣ ಪ್ರಮುಖವಾದದು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಹೇಳಿದರು.

ಹಳೆ ತಾಲೂಕು ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಲ್. ಕೆ. ಜಿ ಹಾಗೂ ಯು. ಕೆ. ಜಿ. ತರಗತಿ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.

ಸಮಾಜದ ಉತ್ತಮ ಪ್ರಜೆಗಳನ್ನು ರೂಪಿಸುವುದು, ಸರ್ಕಾರದ ಆಶಯ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ,ಯುಕೆಜಿ ಅನ್ನು ಪ್ರಾರಂಭಿಸಲಾಗುವುದು. ವಿರಾಜಪೇಟೆ ತಾಲೂಕಿನ ಕೆಲವೆಡೆ ಎಲ್ ಕೆಜಿ, ಯುಕೆಜಿ ಅನ್ನು ಈಗಾಗಲೇ ಆರಂಭಿಸಲಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಇದೀಗ ಅಂಗನವಾಡಿ ಕೇಂದ್ರ ದಲ್ಲಿ ಅಧಿಕೃತವಾಗಿ ಎಲ್ ಕೆ ಜಿ ಯು ಕೆ ಜಿ ಯನ್ನು ಪ್ರಾರಂಭಿಸಲಾಗಿದ್ದು ಗ್ರಾಮೀಣ ಭಾಗದ ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಕೇಕ್ ಕತ್ತರಿಸಿ ಮಕ್ಕಳಿಗೆ ಕೊಟ್ಟು ಶುಭ ಹಾರೈಸಿದರು. ಎಲ್ ಕೆ ಜಿ ಯು ಕೆ ಜಿ ಕೊಠಡಿಯನ್ನು ಉದ್ಘಾಟಿಸಿದ ದಾನಿಗಳಾದ ಡಾ. ದೇವದಾಸ್ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಈ ಕಾರ್ಯಕ್ರಮ ಶ್ಲಾಘನೀಯ .ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ ಉದ್ಘಾಟನೆಗೂ ಮೊದಲು ಸ್ವಾಗತಿಸಿದರು, ಪೂಜಾ ಕಾರ್ಯವನ್ನು ಹರೀಶ್ ಭಟ್ ನೆರವರಿಸಿಕೊಟ್ಟರು.

ಸ್ಥಳದಾನಿಗಳಾದ ಕುಲ್ಲೇಟಿರ ಚಿನ್ನವ್ವ, ದಾನಿಗಳಾದ ಡಾ.ದೇವದಾಸ್ ಅವರನ್ನು ಅಂಗನವಾಡಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪ್ರಸನ್ನ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಗ್ರಾ.ಪಂ. ಸದಸ್ಯರಾದ ಮೊಹಮ್ಮದ್‌ ಟಿ.ಎ. ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸಾಂಪ್ರದಾಯಿಕ ಉಡುಗೆ ತೊಡುಗೆ ದುಡಿ ಕೊಟ್ಟು ಪಾಟ್ ತಲಿಯಕ್ಕಿ ಬೋಲಕ್ ನೊಂದಿಗೆ ಅತಿಥಿಗಳನ್ನು ಗೌರವದಿಂದ ಬರಮಾಡಿಕೊಳ್ಳಲಾಯಿತು

ಪುಟಾಣಿ ವಿದ್ಯಾರ್ಥಿ ವಿಹಾನ್ ಪೊನ್ನಪ್ಪ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮೀ ಸ್ವಾಗತಿಸಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ , ಮೇಲ್ವಿಚಾರಕಿ ಶೀಲ ನಿರೂಪಿಸಿದ ಕಾರ್ಯಕ್ರಮವನ್ನು ಅಂಗನವಾಡಿ ಶಿಕ್ಷಕಿ ಭಾಗ್ಯವತಿ ವಂದಿಸಿದರು.