ಧಾರವಾಡ:
ಬೇಸಿಗೆ ಅವಧಿ ಆರಂಭವಾಗುತ್ತಿದ್ದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಕ್ರಮವಹಿಸಬೇಕು. ಸರ್ಕಾರದ ನಿಯಮದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಏಳು ಗಂಟೆ ವಿದ್ಯುತ್ ಪೂರೈಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.ಹೆಸ್ಕಾಂನ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ಧತೆ ಕುರಿತು ಶುಕ್ರವಾರ ನಡೆದ ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್‌ಗಳಿವೆ. ಈ ಪೈಕಿ 41 ಫೀಡರ್‌ಗಳಿಂದ ಬೆಳಗ್ಗೆ 7ರಿಂದ ಸಂಜೆ 4ರೊಳಗೆ, 12 ಫೀಡರ್‌ಗಳಿಗೆ ಸಂಜೆ 6ರಿಂದ ರಾತ್ರಿ 9 ಹಾಗೂ ರಾತ್ರಿ 10ರಿಂದ ಮಧ್ಯರಾತ್ರಿ 1ರ ವರೆಗೆ ಮತ್ತು 8 ಫೀಡರ್‌ಗಳಿಂದ ಬೆಳಗ್ಗೆ 6ರಿಂದ 10ರ ವರೆಗೆ ಮತ್ತು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ನಿಗದಿತ ಫೀಡರ್‌ಗಳಿಂದ ವಿವಿಧ ಅವಧಿಯಲ್ಲಿ ಒಟ್ಟು ಏಳು ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.
ಹೆಸ್ಕಾಂ ವಿರುದ್ಧ ರೈತರ ದೂರು:ಹಿಂಗಾರು ಗೋಧಿ, ಭತ್ತ, ಕಬ್ಬು ಬೆಳೆಗಳಿಗೆ ನೀರಿನ ಅಗತ್ಯವಿದ್ದು, ರೈತರು ನೀರಾವರಿಗಾಗಿ ಕೊಳವೆಬಾವಿಗಳ ಹೆಚ್ಚು ಅವಲಂಬನೆ ಆಗಿದ್ದಾರೆ. ಕಲಘಟಗಿ, ಅಳ್ನಾವರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ, ತಡ ರಾತ್ರಿ ವಿದ್ಯುತ್ ನೀಡುವುದರಿಂದ ನೀರು ಹಾಯಿಸಲು ತೊಂದರೆ ಆಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಶಿಫ್ಟ್ ಆಧಾರದಲ್ಲಿ ಮಾಡಿದರೂ ಪರವಾಗಿಲ್ಲ, ಆದರೆ, ತೀರಾ ಮಧ್ಯರಾತ್ರಿ ವಿದ್ಯುತ್ ಪೂರೈಸುವುದನ್ನು ಪರಿಶೀಲಿಸಲು ಸಚಿವರು ತಿಳಿಸಿದರು.
ಅತೀ ಹೆಚ್ಚು ಸಮಸ್ಯೆ ಉಂಟಾಗುತ್ತಿರುವ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರ ಉನ್ನತಿಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ, ಹೆಸ್ಕಾಂ ಅಧಿಕಾರಿ, ಎಂಜಿನಿಯರ್‌ಗಳೊಂದಿಗೆ ತಬಕದಹೊನ್ನಳ್ಳಿ ವಿದ್ಯುತ್ ಸ್ಟೇಶನ್ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಲು ಸಚಿವರು ಸೂಚಿಸಿದರು. ನಿಗದಿ ಮತ್ತು ಅರಳಿಕಟ್ಟಿ ಕ್ರಾಸ್, ಬಮ್ಮಿಗಟ್ಟಿ ಸೇರಿ ಮೂರು ಗ್ರಾಮಗಳಿಗೆ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರ್ಕಾರದಿಂದ ಕ್ರಮಕೈಗೊಳ್ಳಲಾಗಿದೆ. ಟೆಂಡರ್, ಗುತ್ತಿಗೆದಾರ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದ ಸಚಿವರು, ಕೆಪಿಟಿಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ವಿ. ರಾಮ್ ಪ್ರಸಾತ್ ಮನೋಹರ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು.ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆ ಬಗ್ಗೆ ಸರಿಯಾದ ಕ್ರಮವಹಿಸಬೇಕು. ಕಾಮಗಾರಿಗಳನ್ನು ತೀವ್ರಗೊಳಿಸಿ, ಬೇಗ ಮುಗಿಸಬೇಕು. ರೈತರು ಟಿಸಿ ಬಯಸಿದಲ್ಲಿ ಬೇಗನೆ ಪೂರೈಸಬೇಕು. ಅಗತ್ಯಗಳಿಗೆ ಅನುಗುಣವಾಗಿ ಟಿಸಿಗಳ ಹೆಚ್ಚು ದಾಸ್ತಾನು ಹೊಂದಬೇಕು ಎಂದರು. ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ, ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು.
ಹೆಸ್ಕಾಂ ತಾಂತ್ರಿಕ ನಿರ್ದೇಶಕ ಜಗದೀಶ ಸಾವಳಗಿ, ಮುಖ್ಯ ಎಂಜನಿಯರ್ ದೀಪಕ ಕಾಮತ, ಅಧೀಕ್ಷಕ ಎಂಜನಿಯರ್ ಕೆ.ವಿ. ಪಾಗಿ ಇದ್ದರು. 2023 ಜುಲೈ ತಿಂಗಳ ಮಳೆಗಾಲ ಅವಧಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಮೃತ ರೈತ ಮಾರುತಿ ಕೋನಪ್ಪನವರ ಪತ್ನಿ ಮಲ್ಲವ್ವ ಅವರಿಗೆ ಸಚಿವ ಸಂತೋಷ ಲಾಡ ಅವರು ಹೆಸ್ಕಾಂ ಪರವಾಗಿ ₹ 5 ಲಕ್ಷದ ಪರಿಹಾರ ಚೆಕ್ ವಿತರಿಸಿದರು.