ತೆಕ್ಕಲಕೋಟೆ: ಅಕ್ಷರ ದಾಸೋಹ ಯೋಜನೆಯಡಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸರಬರಾಜು ಮಾಡಿರುವ ತೊಗರಿ ಬೇಳೆ ಸಂಪೂರ್ಣ ಹುಳು ಹಿಡಿದಿದ್ದು, ಅಡುಗೆಗೆ ಬಳಸಲು ಯೋಗ್ಯವಾಗಿಲ್ಲ. ಇದರಿಂದಾಗಿ ಶಿಕ್ಷಕರು ಗುಣಮಟ್ಟದ ಬೇಳೆಯನ್ನು ಅಂಗಡಿಗಳಲ್ಲಿ ಖರೀದಿಸಿ ಬಿಸಿಯೂಟ ತಯಾರಿಸುವುದು ಸಿರುಗುಪ್ಪ ತಾಲೂಕಿನ ಶಾಲೆಗಳ್ಲಿ ಕಂಡು ಬರುತ್ತಿದೆ.

ಶಾಲೆ ಪ್ರಾರಂಭಗೊಂಡು 2 ತಿಂಗಳ ನಂತರ ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಮಾಡಲಾಗಿದೆ. ಆದರೆ ಪೂರೈಕೆಯಾಗಿರುವ ತೊಗರಿ ಬೇಳೆಯು ನೋಡಲು ಉತ್ತಮವಾಗಿರುವಂತೆ ಕಾಣುತ್ತಿದೆ. ಆದರೆ, ಇದನ್ನು ಅಡುಗೆಗೆ ಬಳಸಿದಾಗ ಸಾಂಬಾರ್ ನಲ್ಲಿ ತೊಗರಿ ಬೇಳೆಯಲ್ಲಿರುವ ಕರಿಹುಳು ಮತ್ತು ಬಿಳಿ ಬಾಲು ಹುಳಗಳು ತೇಲಾಡುತ್ತವೆ. ಇಂತಹ ತೊಗರಿ ಬೇಳೆಯನ್ನು ಬಳಸಿದರೆ ತಮ್ಮ ನೌಕರಿಗೆ ಕುತ್ತು ಬರುತ್ತದೆ ಎನ್ನುವ ಆತಂಕದಲ್ಲಿರುವ ಶಿಕ್ಷಕರು ಅಂಗಡಿಗಳಿಂದ ಬೇಳೆಯನ್ನು ಖರೀದಿಸುತ್ತಿದ್ದಾರೆ.

ತೆಕ್ಕಲಕೋಟೆ ಹೋಬಳಿಯ ಸರ್ಕಾರಿ ಹಿರಿಯ, ಕಿರಿಯ ಪ್ರೌಢಶಾಲೆ, ಅನುದಾನಿತ ಶಾಲೆಗಳಿಗೆ ಕಳಪೆ ಗುಣಮಟ್ಟದ ಕರಿಬಾಲದ ಹುಳು, ಬಿಳಿ ಬಾಲದ ಹುಳು ಬಿದ್ದಿರುವ ತೊಗರಿ ಬೇಳೆ ಪೂರೈಕೆಯಾಗಿದೆ. ಬಹುತೇಕ ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರು ಇದನ್ನು ಬಿಇಒ ಮತ್ತು ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡಿರುವ ಬೇಳೆ ಚೀಲ ತೆರೆದರೆ ಸಾಕು ಹುಳು ಮತ್ತು ಧೂಳಿನ ಪ್ರಭಾವ ತಿಳಿಯುತ್ತಿದೆ. ಅಡುಗೆ ಮಾಡುವ ಸಿಬ್ಬಂದಿ ಎಷ್ಟೇ ಶುಚಿ ಗೊಳಿಸಿದರೂ ಬೇಳೆ ಕುದಿಯುತ್ತಿದ್ದಂತೆಯೇ ಅದರಲ್ಲಿ ಕಪ್ಪು ಮತ್ತು ಬಿಳಿ ಹುಳು ಹೊರ ಬರಲಾರಂಭಿಸುತ್ತವೆ. ಇಂತಹ ಹುಳ ಪೀಡಿತ ಆಹಾರ ಸೇವಿಸುವ ಮಕ್ಕಳ ಆರೋಗ್ಯದ ಬಗ್ಗೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆ ಪಾಲಕರನ್ನುಕಾಡುತ್ತಿದೆ.

ಸರ್ಕಾರ ಪೂರೈಕೆ ಮಾಡಿರುವ ಬೇಳೆಯಲ್ಲಿ ಹುಳುಗಳು ಕಂಡು ಬಂದಿದ್ದು, ಅಂಗಡಿಯಿಂದ ತೊಗರಿ ಬೇಳೆ ಖರೀದಿಸಿ ಬಿಸಿಯೂಟಕ್ಕೆ ಬೇಕಾದ ಸಾಂಬಾರ್ ತಯಾರಿಸುತ್ತಿದ್ದೇನೆ ಎಂದು ತೆಕ್ಕಲಕೋಟೆ ಸರ್ಕಾರಿ ಶಾಲೆ ಮುಖ್ಯಗುರು ಪದ್ಮಾವತಿ ತಿಳಿಸಿದ್ದಾರೆ.


ಶಾಲೆಗೆ ಸರಬರಾಜು ಮಾಡಿರುವ ತೊಗರಿ ಬೇಳೆಯ ಗುಣಮಟ್ಟ ಕಳಪೆಯಾಗಿದೆ ಎಂಬ ದೂರುಗಳು ಶಿಕ್ಷಕರಿಂದ ಬಂದಿದ್ದು, ಬೇಳೆ ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಪವನ್ ಕುಮಾರ್ ತಿಳಿಸಿದ್ದಾರೆ.

ಶಾಲೆಗಳಿಗೆ ಹಂಚಿಕೆಯಾಗಿರುವ ತೊಗರಿ ಬೇಳೆಯಲ್ಲಿ ಹುಳು ಇರುವುದು ಗಮನಕ್ಕೆ ಬಂದಿದೆ. ಗುಣಮಟ್ಟ ಸರಿ ಇಲ್ಲದಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಈ ಬಗ್ಗೆ ತಕ್ಷಣವೇ ಉತ್ತಮ ಗುಣಮಟ್ಟದ ಬೇಳೆ ಖರೀದಿಸಿ ಬಿಸಿಯೂಟ ತಯಾರಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಬಿಇಒ ಎಚ್ ಗುರ್ರಪ್ಪ ಹೇಳಿದ್ದಾರೆ.

ಯಾವ ಶಾಲೆಗಳಿಗೆ ಕಳಪೆ ಗುಣಮಟ್ಟದ ತೊಗರಿ ಬೇಳೆ ಪೂರೈಕೆ ಆಗಿದೆಯೋ ಆ ಶಾಲೆಗಳ ಮುಖ್ಯಗುರುಗಳಿಂದ ದೂರಿನ ಪತ್ರವನ್ನು ಪಡೆದು ನಮ್ಮ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ ಎಂದು ತಾಲೂಕು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಜಾಫರ್ ತಿಳಿಸಿದ್ದಾರೆ.