ಕನ್ನಡಪ್ರಭ ವಾರ್ತೆ ಸೊರಬ
ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಿ. ಮಂಜುನಾಥ್ ಅವರಿಗೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಜಾನಪದ ಪರಿಷತ್ ಸಂಪೂರ್ಣ ಬೆಂಬಲಿಸಲಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಕರೆದಿದ್ದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಐತಿಹಾಸಿಕ ಪರಂಪರೆ, ಸ್ವಾಯತ್ತತೆ ಮತ್ತು ಘನತೆಯನ್ನು ಕಾಪಾಡಲು ನಿಜವಾದ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಪರಿಷತ್ತಿನ ಚುಕ್ಕಾಣಿ ಹಿಡಿಯುವುದು ಅತ್ಯಗತ್ಯವಾಗಿದೆ. ಜಾಣಗೆರೆ ವೆಂಕಟರಾಮಯ್ಯ ಅವರು ದಶಕಗಳಿಂದ ನಾಡು-ನುಡಿಗಾಗಿ ಸಲ್ಲಿಸಿರುವ ಸೇವೆ ಮತ್ತು ಸಾಹಿತ್ಯ ಕೃಷಿ ಅನುಪಮವಾದುದು. ಅದೇ ರೀತಿ, ಜಿಲ್ಲೆಯಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಡಿ. ಮಂಜುನಾಥ್ ಅವರ ಪಾತ್ರ ಹಿರಿದಾಗಿದೆ ಎಂದರು.ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ಉಳಿಯಬೇಕಾದರೆ ಸಮರ್ಥ ನಾಯಕತ್ವದ ಅವಶ್ಯಕತೆಯಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಡಿ. ಮಂಜುನಾಥ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ನಮ್ಮ ಎರಡೂ ಸಂಘಟನೆಗಳ ಎಲ್ಲಾ ಸದಸ್ಯರು ಹಾಗೂ ಕನ್ನಡಿಗರು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ ಎಂದು ತಿಳಿಸಿದರು.
ತಾಲೂಕು ಕಸಾಪ ಹಿರಿಯ ಸದಸ್ಯ ಡಾ. ಎಂ.ಕೆ. ಭಟ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ಗೆ ಡಿ. ಮಂಜುನಾಥ್ ರವರು ಬೆನ್ನೆಲುಬಾಗಿ ನಿಂತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯದಿಂದ ಮುಕ್ತವಾಗಿ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಇನ್ನಷ್ಟು ಕ್ರಿಯಾಶೀಲವಾಗಿ ಬೆಳೆಯಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ, ಕಾರ್ತಿಕ್ ಸಾಹುಕಾರ್, ಬಸವನಗೌಡ ಪಾಟೀಲ್, ಮಹಾಂತೇಶ್ ಕಳ್ಳಿಕೊನೆ, ಉಮೇಶ್ ಬಿಚ್ಚುಗತ್ತಿ, ಲಕ್ಷ್ಮಣ್ ಸಾಗರ್ ನಡಹಳ್ಳಿ, ರೇಣುಕಮ್ಮ ಗೌಳಿ, ಉಪನ್ಯಾಸಕಿ ಪವಿತ್ರ ರಂಗನಾಥ, ಕೃಷ್ಣಮೂರ್ತಿ, ರಾಜಶೇಖರ್, ಮೋಹನ್ ಸುರಭಿ, ಭಾರತಿ, ದೇವರಾಜ್, ರಾಘವೇಂದ್ರ, ರಾಜೇಂದ್ರ, ಅಭಿಷೇಕ್, ಪ್ರತಿಭಾ, ಮಮತಾ, ನಾಗರತ್ನ, ವಿನಯ ಸೇರಿದಂತೆ ಮೊದಲಾದವರಿದ್ದರು.