ಎಲ್ಲಾ ಗ್ರಾಪಂ ಸ್ವಚ್ಛತಾ ಪೌರ ಕಾರ್ಮಿಕರನ್ನು ಒಳಗೊಂಡಂತೆ ಪಿಡಿಒಗಳ ಉಪಸ್ಥಿತಿಯಲ್ಲಿ ತರ್ತು ಸಭೆ ನಡೆಸಿ ಮೇಲಾಧಿಕಾರಿಗಳ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ತಾವು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪೌರ ಕಾರ್ಮಿಕರ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ತಮ್ಮ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗ್ರಾಪಂಗಳಲ್ಲಿ ಸ್ವಚ್ಛತಾ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ, ಆರೋಗ್ಯ ಕಿಟ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಜಿಪಂ ಹಾಗೂ ತಾಪಂನಿಂದ ಆದೇಶವಿದ್ದರೂ ಪಿಡಿಒಗಳು ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿ ಪೌರಕಾರ್ಮಿಕರು ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ತಾಪಂ ಕಾರ್ಯಾಲಯ ಬಳಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘಟನೆಯೊಂದಿಗೆ ಜಮಾವಣೆಗೊಂಡ ತಾಲೂಕಿನ 21 ಗ್ರಾಪಂಗಳಿಂದ ಆಗಮಿಸಿದ್ದ ಪೌರಕಾರ್ಮಿಕರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ತಾಪಂ ಇಒ ಸೇರಿದಂತೆ ಪಿಡಿಒ ಅಧಿಕಾರಿಗಳನ್ನು ಸಭಾಂಗಣದಿಂದ ಹೊರಬರಲಾಗದಂತೆ 20 ನಿಮಿಷಗಳ ಕಾಲ ಘೇರಾವ್ ಹಾಕಿ, ಘೋಷಣೆ ಕೂಗಿದರು.

ಕಾರ್ಯನಿಮಿತ್ತ ತಾಪಂ ಕಚೇರಿಗೆ ಆಗಮಿಸಿದ್ದ ಜಿಪಂ (ಅಭಿವೃದ್ಧಿ-2) ಉಪ ಕಾರ್ಯದರ್ಶಿ ಲಕ್ಷ್ಮೀ ಅವರು ವಿಚಾರ ತಿಳಿದು ಇಒ ಚಂದ್ರ ಅವರೊಂದಿಗೆ ಪ್ರತಿಭಟನಾ ನಿರತ ಸ್ಥಳಕ್ಕೆ ತೆರಳಿ ಪ್ರತಿಭಟನಕಾರರ ಸಮಸ್ಯೆ ಬಗೆಹರಿಸಿಕೊಡುವ ಭರವಸೆಯೊಂದಿಗೆ ಮುಂದಾಗಿದ್ದು, ಘೇರಾವ್ ತೆರವುಗೊಳಿಸುವಂತೆ ಹೋರಾಟ ನಿರತರ ಮನವೊಲಿಸಿದರು.

ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ, ತಾಲೂಕಿನ 21 ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಪೌರ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಆದೇಶದನ್ವಯ ಕಡ್ಡಾಯವಾಗಿ ಕನಿಷ್ಠ ವೇತನ, ಆರೋಗ್ಯ ಕಿಟ್, ಸುರಕ್ಷತಾ ಉಪಕರಣಗಳು, ಆರೋಗ್ಯ ತಪಾಸಣೆ, ವಿಮಾ ಸೌಲಭ್ಯ ಮತ್ತು ಗುರುತಿನ ಚೀಟಿ ಒದಗಿಸುವಂತೆ ಆದೇಶಿಸಿದ್ದಾರೆ. ಆದರೆ, ಮೇಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ ಗ್ರಾಪಂ ಸ್ವಚ್ಛತಾ ಪೌರ ಕಾರ್ಮಿಕರನ್ನು ಒಳಗೊಂಡಂತೆ ಪಿಡಿಒಗಳ ಉಪಸ್ಥಿತಿಯಲ್ಲಿ ತರ್ತು ಸಭೆ ನಡೆಸಿ ಮೇಲಾಧಿಕಾರಿಗಳ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ತಾವು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪೌರ ಕಾರ್ಮಿಕರ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ತಮ್ಮ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಮನವಿ ಆಲಿಸಿದ ಉಪಕಾರ್ಯದರ್ಶಿ (ಅಬಿವೃದ್ಧಿ)-2 ಲಕ್ಷ್ಮಿ ಹಾಗೂ ತಾಪಂ ಇಒ ಚಂದ್ರ ಅವರುಗಳು ಸ್ಥಳದಲ್ಲಿದ್ದ ಪಿಡಿಒಗಳನ್ನು ತರಾಟೆ ತೆಗೆದುಕೊಂಡು ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡದಿರಲು ಕಾರಣವೇನು? ಸೂಕ್ತ ಕಾರಣಗಳೊಂದಿಗೆ ಲಿಖಿತ ರೂಪದಲ್ಲಿ ತಾಪಂ ಅಧಿಕಾರಿಗೆ ಉತ್ತರ ನೀಡುವಂತೆ ಸೂಚಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಗೌರವ ಸಲಹೆಗಾರ ಸಿ.ಆರ್.ವಿಜಯ, ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್‌ಕುಮಾರ್, ತಾಲೂಕು ಅಧ್ಯಕ್ಷ ಬೀರಿಹುಂಡಿ ಮಂಜುನಾಥ್ ಸೇರಿದಂತೆ ತಾಲೂಕಿನ ವಿವಿಧ ಗ್ರಾ.ಪಂಗಳ ಪೌರಕಾರ್ಮಿಕರು ಭಾಗಿಯಾಗಿದ್ದರು.